ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ 1,008 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಆದೇಶವನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಕಾರ್ಯಕರ್ತೆಯರು ಪೌರಾಡಳಿತ ಸಚಿವ ರಹೀಂ ಖಾನ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೀದರ್ ನಗರದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಅವರ ಗೃಹ ಕಚೇರಿ ಎದುರು ನಡೆಸುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿರಿಸಿದೆ, ಆದರೆ ಸಚಿವರು ಇಲ್ಲಿಯವರೆಗೆ ನಮ್ಮ ಮನವಿ ಸ್ವೀಕರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಬೀದರ್ ತಾಲೂಕು ಸಮಿತಿ ಅಧ್ಯಕ್ಷೆ ಶಕುಂತಲಾ ಸೋನಿ ಮಾತನಾಡಿ, “ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು. ಅಂಗನವಾಡಿ ಕೇಂದ್ರದ ಹೆಸರು ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ ಒಂದು ಪರಿವರ್ತಿಸಬೇಕು. ಸರ್ಕಾರ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ಮತ್ತು ಶೂಗಳನ್ನು ವಿತರಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ʼಶಿಕ್ಷಕಿʼಯರು ಎಂದು ಪರಿಗಣಿಸಬೇಕು. ಅಂಗನವಾಡಿ ಕೇಂದ್ರಗಳನ್ನು ಮುಚ್ಚಿದರೆ ನಮ್ಮ ಬದುಕಿಗೆ ಉಳಿಗಾಲವಿಲ್ಲ” ಎಂದು ಹೇಳಿದರು.
ಸಮಿತಿಯ ಔರಾದ ತಾಲೂಕು ಅಧ್ಯಕ್ಷೆ ಪದ್ಮಾವತಿ ಸ್ವಾಮಿ ಮಾತನಾಡಿ, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್‌ಡಿಬಿ ಹೊಸದಾಗಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಮೊದಲ ಬಾರಿಗೆ ಪ್ರಾರಂಭಿಸುವ ನಿರ್ಧಾರ ಕೈಗೊಂಡಿರುವುದು ಖಂಡನೀಯ. ಇದು ಮುಂದಿನ ದಿನಗಳಲ್ಲಿ ಇಡೀ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ವಿಸ್ತರಿಸುವ ಯೋಜನೆಯಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರ ಬದುಕು ಬೀದಿಗೆ ಬರಲಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ” ಎಂದು ಎಚ್ಚರಿಸಿದರು.
ಹುಮನಾಬಾದ್ ತಾಲೂಕಾಧ್ಯಕ್ಷೆ ಉಷಾ ಗುತ್ತೆದಾರ್ ಮಾತನಾಡಿ, “ಅಂಗನವಾಡಿ ಕೇಂದ್ರಗಳಿಗೆ ಬರುವ 3 ರಿಂದ 6 ವರ್ಷದ ಮಕ್ಕಳು ಶಿಕ್ಷಣ ಇಲಾಖೆಗೆ ಬಂದರೆ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಯಾರು? ಆಗ ಅಂಗನವಾಡಿ ಕೇಂದ್ರಗಳು ಮುಚ್ಚಿ ಹೋಗುತ್ತವೆ. ಸರ್ಕಾರದ ಕೆಲವು ನಿರ್ಧಾರಗಳಿಂದ ಅಂಗನವಾಡಿಗಳ ಅಸ್ತಿತ್ವಕ್ಕೆ ದಕ್ಕೆಯಾಗಿದೆ. ಸರ್ಕಾರ ತಕ್ಷಣ ಇಂತ ನಿರ್ಧಾರಗಳನ್ನು ಹಿಂದಕ್ಕೆ ಪಡೆಯಬೇಕು. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಅನೇಕ ಜನ ಉನ್ನತ ಶಿಕ್ಷಣ ಪಡೆದಿರುವ ಕಾರ್ಯಕರ್ತೆಯರಿದ್ದಾರೆ. ಆದರೆ ಸರ್ಕಾರ ನಮ್ಮ ಯಾವುದೇ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಯಡಿಯೂರಪ್ಪ ಮೇಲಿನ ಪೋಕ್ಸೋ ಕೇಸು; ನಾವೆಲ್ಲರೂ ಮನುಷ್ಯರಾಗಬೇಕಿದೆ
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸುಮಿತ್ರ, ಚೆನ್ನಮ್ಮ, ಗೌರಮ್ಮ, ಭುವನೇಶ್ವರಿ, ಶ್ರೀದೇವಿ, ಸರಸ್ವತಿ, ಶ್ವೇತಾ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.