ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಮೊಬೈಲ್ ಸ್ವಿಚ್ ಆನ್ ಆಗಿರುವ ಲಾರಿ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಗುಡ್ಡ ಕುಸಿತದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಲಾಗಿದೆ. ಕಳೆದ 5 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಕಠಿಣ ಭೂಪ್ರದೇಶ ಮತ್ತು ಭಾರೀ ಮಳೆಯು ರಕ್ಷಣಾ ತಂಡಕ್ಕೆ ಪ್ರಮುಖ ಅಡಚಣೆ ಉಂಟು ಮಾಡಿದೆ.
ಅಂಕೋಲಾ ತಾಲೂಕಿನ ಶಿರೂರ ನಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ.@DgpKarnataka @Rangepol_WR @KarnatakaCops pic.twitter.com/bDqQPsJMsO
— SP Karwar (@spkarwar) July 21, 2024
ಭಾರೀ ಮಳೆಯ ನಡುವೆಯೇ ರಾಷ್ಟ್ರೀಯ ಹೆದ್ದಾರಿ 66 ಅನ್ನು ತೆರವುಗೊಳಿಸುವ ಮತ್ತು ಕಾಣೆಯಾದವರ ಹುಡುಕಾಟದ ಕೆಲಸ ಮುಂದುವರೆದಿದೆ. ದುರ್ಗಮ ಪ್ರದೇಶ, ಪ್ರತಿಕೂಲ ಹವಾಮಾನ, ಗಂಗವಳ್ಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಹೆಚ್ಚಿನ ಭೂಕುಸಿತದ ಸಾಧ್ಯತೆಯನ್ನು ಪರಿಗಣಿಸಿ, ಜಿಲ್ಲಾಡಳಿತವು ಭಾರತೀಯ ಕಡಲ ರಕ್ಷಣಾ ಪಡೆ ಸಹಾಯ ಕೋರಿ ಶುಕ್ರವಾರ ಪತ್ರ ಬರೆದಿದೆ.
ಘಟನೆಯಲ್ಲಿ ನಾಪತ್ತೆಯಾದ ಭಾರತ್ ಬೆಂಝ್ ಕಂಪನಿಯ ಲಾರಿಯ ಚಾಲಕ, ಕೇರಳದ ಕೋಝಿಕ್ಕೋಡ್‌ನ ಅರ್ಜುನ್ (30) ಅವರ ಮೊಬೈಲ್ ಆನ್ ಆಗಿತ್ತು ಎಂಬ ಸುದ್ದಿ ಸಂಚಲನ ಮೂಡಿಸಿತ್ತು.
ಜು.16 ರಂದು ನಡೆದ ಅಪಘಾತದಲ್ಲಿ ಜೋಯಿಡಾದಿಂದ ಶಿರೂರಿಗೆ ಹೊರಟಿದ್ದ ಲಾರಿ ಸಿಕ್ಕಿ ಹಾಕಿಕೊಂಡಿರುವುದು ಖಚಿತವಾಗಿತ್ತು. ಈ ಸಂಬಂಧ ಸಂಬಂಧಪಟ್ಟ ಲಾರಿ ಕಂಪನಿಯ ಮಾಲೀಕ ಅಬ್ದುಲ್ ಮುನಾಫ್ ಅಂಕೋಲಾ ಠಾಣೆಗೆ ದೂರು ನೀಡಿದ್ದರು.
ಅವರ ಮೊಬೈಲ್ ಶುಕ್ರವಾರ ಒಮ್ಮೆ ಆನ್ ಆಗಿತ್ತು ಎಂದು ಅರ್ಜುನ್ ಕುಟುಂಬದವರು ತಿಳಿಸಿದ್ದಾರೆ. ಕೇರಳ ಸರ್ಕಾರ ಸಹ ಇದನ್ನು ದೃಢಪಡಿಸಿದೆ.
ಘಟನಾ ಸ್ಥಳಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ
ಘಟನೆ ನಡೆದಿರುವ ಸ್ಥಳಕ್ಕೆ ಇಂದು(ಜುಲೈ 21) ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಲಿದ್ದಾರೆ ಎಂದು ಸಿಎಂ ಕಚೇರಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಸ್ಥಳಕ್ಕೆ ದೌಡಾಯಿಸಿದ ಕೇರಳದ ಮಾಧ್ಯಮಗಳು
ಶಿರೂರಿನ ಘಟನೆಯಲ್ಲಿ ಲಾರಿ ಚಾಲಕ ಕೇರಳದ ಅರ್ಜುನ್ ಅವರ ಮೊಬೈಲ್ ಆನ್ ಆಗಿತ್ತು ಎಂಬ ಸುದ್ದಿ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ ಕೇರಳದ ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳ ಪತ್ರಕರ್ತರ ತಂಡ ಘಟನಾ ಸ್ಥಳಕ್ಕೆ ಆಗಮಿಸಿದೆ. ಅಲ್ಲದೇ. ಕಾರ್ಯಾಚರಣೆಯ ಬಗ್ಗೆ ನಿರಂತರವಾಗಿ ವರದಿ ಪ್ರಸಾರ ಮಾಡುತ್ತಿದೆ.
ಈ ನಡುವೆ ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎಕೆಎಂ ಅಶ್ರಫ್ ಅವರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆಯ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಳ್ಳುತ್ತಿದ್ದಾರೆ.
ಚಾಲಕ ಅರ್ಜುನ್ ಅವರು ಜೀವಂತವಾಗಿ ಮರಳಲು ಕುಟುಂಬದ ಸದಸ್ಯರು ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಜನರು ಪ್ರಾರ್ಥನೆ ನಡೆಸುತ್ತಿದ್ದಾರೆ.
