- ‘ಆರಗ ಜ್ಞಾನೇಂದ್ರ ಹೇಳಿಕೆ ಸಂಘ ಪರಿವಾರ ಮತ್ತು ಬಿಜೆಪಿ ಹೇಳಿಕೆಯಾಗಿದೆ’
- ದಮನಿತ ವರ್ಗ ಶೋಷಿತವಾಗಿ ಉಳಿಯಬೇಕು ಎಂಬುದು ಬಿಜೆಪಿ ಪ್ರತಿಪಾದನೆ
ಸಮಾಜದಲ್ಲಿ ಜಾತಿ ಪದ್ಧತಿ ಇರಬೇಕು ಎಂಬ ಮನಸ್ಥಿತಿ ಬಿಜೆಪಿಯವರದ್ದು. ಹೀಗಾಗಿ ಅವರು ಆಗಾಗ ತಮ್ಮ ಹಿಡನ್ ಅಜೆಂಡಾ ಬಗ್ಗೆ ಸಾರ್ವಜನಿಕವಾಗಿ ಹೇಳುತ್ತಾರೆ. ದಮನಿತ ವರ್ಗ ಶೋಷಿತವಾಗಿ ಉಳಿಯಬೇಕು ಎಂದು ಪರೋಕ್ಷವಾಗಿ ಬಿಜೆಪಿ ಪ್ರತಿಪಾದಿಸುತ್ತದೆ. ಅದರ ಮುಂದುವರಿದ ಭಾಗವಾಗಿ ನಮ್ಮ ಪಕ್ಷದ ಇಬ್ಬರು ನಾಯಕರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅನೇಕ ಬಾರಿ ಇಂತಹ ಮಾತುಗಳನ್ನು ಅನಂತಕುಮಾರ್ ಹೆಗಡೆ ಅವರು ಆಡುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಇದು ಸಂಘ ಪರಿವಾರ ಹಾಗೂ ಬಿಜೆಪಿ ಹೇಳಿಕೆ. ಆರಗ ಜ್ಞಾನೇಂದ್ರ ಅವರ ಹೇಳಿಕೆಯಲ್ಲ” ಎಂದಿದ್ದಾರೆ.
“ತೀರ್ಥಹಳ್ಳಿಯಂತಹ ನಾಡಿನಲ್ಲಿ ಇಂತಹ ಅರೆ ಜ್ಞಾನವಂತರು ಬಂದಿರುವುದು ದುರಂತ. ಸಜ್ಜನ ರಾಜಕಾರಣಕ್ಕೆ ಹೆಸರಾದ ಶಾಂತವೇರಿ ಗೋಪಾಲಗೌಡರು, ಡಿ.ಬಿ ಚಂದ್ರೇಗೌಡರು, ಕಿಮ್ಮನೆ ರತ್ನಾಕರ, ಕೊಣಂದೂರು ಲಿಂಗಪ್ಪನವರು ಈ ಕ್ಷೇತ್ರದ ಶಾಸಕರಾಗಿದ್ದರು. ಇಂತಹ ಪ್ರಬುದ್ಧ ರಾಜಕಾರಣಿಗಳನ್ನು ಕೊಟ್ಟ ತೀರ್ಥಹಳ್ಳಿ ಕ್ಷೇತ್ರದಿಂದ ಆರಗ ಜ್ಞಾನೇಂದ್ರರಂತಹ ಅರೆ ಜ್ಞಾನಿಗಳು ಶಾಸಕರಾಗಿರುವುದು ದುರ್ದೈವ” ಎಂದು ಲೇವಡಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಜೀವಕ್ಕೆ ಕಂಟಕ ತರುತ್ತಿರುವ ಜೀವಜಲ; ಆಡಳಿತಶಾಹಿಯೇ ಹೊಣೆ
ಸೈದ್ಧಾಂತಿಕವಾಗಿ ಎದುರಿಸಲಾಗುತ್ತಿಲ್ಲ
“ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ, ಅವರ ವಿರುದ್ಧ ಕೀಳು ಮಟ್ಟದ ಮಾತುಗಳನ್ನಾಡುತ್ತಿದ್ದಾರೆ. ಕಳೆದ ಬಾರಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಷಣ ಮಾಡುತ್ತಾ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರಿಗೆ ಪಾಠ ಕಲಿಸಿದ್ದೇವೆ, ಈಗ ಮರಿ ಖರ್ಗೆ ಅವರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದ್ದರು. ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಸರ್ಕಾರದ ತಪ್ಪುಗಳನ್ನು ಅನಾವರಣ ಮಾಡಿ ವಿರೋಧಿಸುತ್ತಾ ಬಂದಿದ್ದಾರೆ. ಇದರಿಂದ ವಿಚಲಿತರಾದ ಸಂಘ ಪರಿವಾರದ ನಾಯಕರು ಖರ್ಗೆ ಅವರ ಮೇಲೆ ಹಗೆತನದಿಂದ ವೈಯಕ್ತಿಕ ಟೀಕೆ ಮಾಡುತ್ತಾ ಬಂದಿದ್ದಾರೆ” ಎಂದು ಹೇಳಿದ್ದಾರೆ.
“ಚುನಾವಣೆ ಮುಗಿದು ಎರಡೂವರೆ ತಿಂಗಳಾಗಿದೆ. ಆದರೂ ಬಿಜೆಪಿಗೆ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ಇದು ಬಿಜೆಪಿ ಯಾವ ಸ್ಥಿತಿಗೆ ಬಂದು ತಲುಪಿದೆ ಎಂಬುದಕ್ಕೆ ಸಾಕ್ಷಿ. ವಿರೋಧ ಪಕ್ಷ ನಾಯಕನಿಲ್ಲದೆ ಅಧಿವೇಶನ ಮಾಡಿದ ಅಪಕೀರ್ತಿಗೆ ಬಿಜೆಪಿ ಒಳಗಾಗಿದೆ” ಎಂದು ಟೀಕಿಸಿದ್ದಾರೆ.
“ಸಿ ಟಿ ರವಿ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಇದ್ದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿದೆ. ಇವರು ಚಿಕ್ಕಮಗಳೂರು ಉಸ್ತುವಾರಿ ನಿಭಾಯಿಸಲು ಆಗುವುದಿಲ್ಲ ಎಂದು ಅರಿತಿದ್ದಾರೆ. ಅವರ ಸಾಧನೆ, ಕೊಡುಗೆ ಏನೂ ಇಲ್ಲ ಎಂದು ಆ ಪಕ್ಷದವರಿಗೆ ಅರ್ಥವಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದು ಅಂಗಲಾಚುವ ಪರಿಸ್ಥಿತಿ ಸಿ ಟಿ ರವಿ ಅವರಿಗೆ ಎದುರಾಗಿದೆ” ಎಂದು ಕಾಲೆಳೆದಿದ್ದಾರೆ.