ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಮಾರ್ಷಲ್ ನೌಕರಿಯನ್ನು ಕೊಡಿಸುವುದಾಗಿ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲಸೂರುಗೇಟ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಇಲಾಖೆ (ಎಕ್ಸ್) ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, “ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿಯನ್ನು ಕೊಡಿಸುವುದಾಗಿ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು, ವಂಚಿಸುತ್ತಿದ್ದ ಆರೋಪಿಯನ್ನು ಹಲಸೂರುಗೇಟ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತ ಭಜಂತ್ರಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ” ಎಂದು ಹೇಳಿದೆ.
“ಆರೋಪಿಯು ಬಿಬಿಎಂಪಿಯಲ್ಲಿ ತಾನು ಕೆಲಸ ಮಾಡಿಕೊಂಡಿರುವುದಾಗಿ ಸಂತ್ರಸ್ತರಿಗೆ ಹೇಳಿ ನಂಬಿಸಿದ್ದಾನೆ. ಬಿಬಿಎಂಪಿಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್ ನೌಕರಿಗೆ, ನೇಮಕ ಮಾಡಿಕೊಳ್ಳಲಾಗುತ್ತಿದೆ. ₹3,000 ಹಣವನ್ನು ನೀಡಿದರೆ, ನೇಮಕಾತಿ ಮಾಡಿಸುವುದಾಗಿ ನಂಬಿಸಿ, 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ₹3,000 ಹಣವನ್ನು ಫೋನ್ ಪೇ ಮೂಲಕ ಪಡೆದುಕೊಂಡಿದ್ದಾನೆ” ಎಂದು ತಿಳಿಸಿದೆ.
“ಅಲ್ಲದೇ, ನೇಮಕಾತಿ ಆದೇಶದ ನಕಲಿ ಪ್ರತಿಗಳನ್ನು ಸೃಷ್ಟಿಸಿ, ಅವುಗಳನ್ನೇ ಅಸಲಿ ಆದೇಶ ಪತ್ರಗಳೆಂದು ಬಿಂಬಿಸಿ, ವಾಟ್ಸಆಪ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಳುಹಿಸಿಕೊಟ್ಟಿದ್ದಾನೆ” ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 18 ಮಾದರಿಯಲ್ಲಿ ಸೈಬರ್ ಕ್ರೈಂ; ಬರೋಬ್ಬರಿ ₹470 ಕೋಟಿ ವಂಚನೆ
ಈ ಕುರಿತು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಆತನಿಂದ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.