ರಂಗಭೂಮಿಯ ಪಾಲನೆ ಮತ್ತು ಪೋಷಣೆಯ ಹೊಣೆಗಾರಿಕೆ ಕಲಾವಿದರು ಮತ್ತು ಕಲಾಪೋಷಕರ ಮೇಲಿದ್ದು, ದಿಟವಾದ ಕಲೆಯನ್ನು ಬೆಳೆಸಬೇಕಾದ ಅಗತ್ಯತೆಯಿದೆ ಎಂದು ನಟಿ ಉಮಾಶ್ರೀ ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ ರಂಗೋತ್ಸವ ಸಮಾರಂಭದಲ್ಲಿ ರಂಗಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದರು.
ಸಿನಿಮಾ ಮತ್ತು ಧಾರಾವಾಹಿಗಳೆರಡೂ ರಂಗಭೂಮಿಯಿಂದಲೇ ಬೆಳೆದುಬಂದಿದ್ದು. ಅಂದಿನ ಕಾಲದಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರು ನಿರ್ವಹಿಸುತ್ತಿದ್ದರು. ಆದರೆ, ಮಳವಳ್ಳಿ ಸುಂದರಮ್ಮ ಅವರು ಸ್ತ್ರೀ ಪಾತ್ರಗಳನ್ನು ನಿರ್ವಹಿಸುವ ಮೂಲಕ ರಂಗಭೂಮಿಗೆ ಹೊಸ ತಿರುವು ನೀಡಿದರು ಎಂದು ಸ್ಮರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ರಾಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಮಳವಳ್ಳಿ ಶಿವಣ್ಣ ಮಾತನಾಡಿ, ಮಳವಳ್ಳಿ ತಾಲೂಕು ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ಮಹದೇಶ್ವರರ ನಾಡಾಗಿದ್ದು, ಈ ನಾಡು ಹಲವು ಪ್ರತಿಭಾವಂತ ಕಲಾವಿದರನ್ನು ದತ್ತು ಪಡೆದಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾಧಿಕಾರಿಗಳಿಂದ ಪೂರ್ವಭಾವಿ ಸಭೆ
ರಂಗೋತ್ಸವ ಸಮಾರಂಭದಲ್ಲಿ ರಂಗ ಕಲಾವಿದರಾದ ಶ್ರೀನಿವಾಸ ಜಿ ಕಪ್ಪಣ್ಣ, ಲೋಕೇಶ್ ಮತ್ತು ಮಳವಳ್ಳಿ ಸುಂದರಮ್ಮ ಕುಟುಂಬಸ್ಥರು, ರಂಗ ಬಂಡಿಯ ಮಧು, ಸಂಘಟಕರಾದ ಎನ್ ಎಲ್ ಭರತ್ ರಾಜ್ ಮುಂತಾದವರು ಉಪಸ್ಥಿತರಿದ್ದರು.
