ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡ ಹಿನ್ನಲೆ ಸ್ಥಳೀಯ ಪಟ್ಟಣ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷೆಯಂತೆ ಅಧಿಕಾರ ಚುಕ್ಕಾಣಿ ಹಿಡಿದಿದೆ.
ಬುಧವಾರ ಗುಬ್ಬಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಬಿ.ಆರತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಮೀಸಲಾತಿ ನಿರ್ಣಯ ಕುರಿತಂತೆ ನ್ಯಾಯಾಲಯ ತಡೆಯಾಜ್ಞೆ ತೆರೆವಿನ ಬಳಿಕ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲು ನಿಗದಿಯಾಗಿತ್ತು. ಈ ಹಿನ್ನಲೆ ನಡೆದ ಚುನಾವಣೆಯಲ್ಲಿ ಶಾಸಕರ ಬೆಂಬಲದಲ್ಲಿ ಮಂಗಳಮ್ಮ ರಾಜಣ್ಣ ಅಧ್ಯಕ್ಷರಾಗಿ ಮಮತಾ ಶಿವಪ್ಪ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಪಟ್ಟಣ ಪಂಚಾಯಿತಿ ಒಟ್ಟು 19 ಸದಸ್ಯರಲ್ಲಿ ಶಾಸಕರ ಬೆಂಬಲದ ಒಟ್ಟು 12 ಮಂದಿ ಸದಸ್ಯರ ಸ್ಪಷ್ಟ ಬಹುಮತ ಹಿನ್ನಲೆ ಕಾಂಗ್ರೆಸ್ ಪಕ್ಷ ಅವಿರೋಧ ಚುಕ್ಕಾಣಿ ಗಳಿಸಿಕೊಂಡಿದೆ. ಉಳಿದಂತೆ ಬಿಜೆಪಿ ಆರು ಸದಸ್ಯರು, ಜೆಡಿಎಸ್ ಓರ್ವ ಸದಸ್ಯರು ಸಹ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆ ಹಿನ್ನಲೆ ಎರಡೂ ಸ್ಥಾನವನ್ನು ಅವಿರೋಧ ಆಯ್ಕೆ ಎಂದು ತಹಶೀಲ್ದಾರ್ ಘೋಷಣೆ ಮಾಡಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಸುದ್ದಿಗಾರರೊಂದಿಗೆ ಮಾತನಾಡಿ ಅಧಿಕಾರ ಹಿಡಿದ ಕಾಂಗ್ರೆಸ್ ಆಡಳಿತ ಶೀಘ್ರದಲ್ಲಿ ಪಟ್ಟಣದ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲಿದೆ. ಈಗಾಗಲೇ 3.80 ಕೋಟಿ ರೂ ಮಂಜೂರು ಮಾಡಲಾಗಿದೆ. ರೈತರ ಜಮೀನು ವಶಕ್ಕೆ ಪಡೆದು ಕಾರ್ಯ ಪೂರ್ತಿಯಾಗಲಿದೆ. ಈ ಜೊತೆಗೆ ಪಟ್ಟಣದಲ್ಲಿ ಬಾಕಿ ಇರುವ ರಸ್ತೆಗಳ ಅಭಿವೃದ್ಧಿಗೆ ಹಾಗೂ ಹೊರ ಭಾಗದಲ್ಲಿ ನೀರು ಪಟ್ಟಣದೊಳಗೆ ಬಾರದಂತೆ ದೊಡ್ಡ ಚಾನಲ್ ನಿರ್ಮಾಣಕ್ಕೆ ವಿಶೇಷವಾಗಿ 8 ಕೋಟಿ ರೂ ಅನುದಾನ ಬರಲಿದೆ ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ ಹಾಗೂ ಉಪಾಧ್ಯಕ್ಷೆ ಮಮತಾ ಶಿವಪ್ಪ ಮಾತನಾಡಿ ಶಾಸಕರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಪಣ ತೊಟ್ಟು ಸ್ವಚ್ಚತೆ, ರಸ್ತೆ, ನೀರು ಸೇರಿದಂತೆ ಎಲ್ಲಾ ಮೂಲಭೂತ ಸವಲತ್ತು ಒದಗಿಸುತ್ತೇವೆ. ಅವಿರೋಧ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು.
ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಪಪಂ ಸದಸ್ಯರು, ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಭಾಗಿಯಾಗಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇದ್ದರು.
