ಕೆಲಸಕ್ಕೆ ವಿಳಂಬ ಮಾಡಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್ಐ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಹಲ್ಲೆ ಮಾಡಿರುವ ಘಟನೆ ಭಾನುವಾರ ಬೀದರ್ ನಗರದ ನೌಬಾದ್ ಬಳಿ ನಡೆದಿದ್ದು, ಹಲ್ಲೆ ನಡೆಸಿದ ಕಾನ್ಸ್ಟೇಬಲ್ ಧನರಾಜ್ ಎಂಬಾತನನ್ನು ಅಮಾನತು ಮಾಡಲಾಗಿದೆ.
ನಗರದ ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ಮಲ್ಲಮ್ಮ ಎಂಬುವರ ಮೇಲೆ ನ್ಯೂಟೌನ್ ಠಾಣೆಯ ಪೇದೆ ಧನರಾಜ್ ಎಂಬುವರು ಹಲ್ಲೆ ನಡೆಸಿದರು. ಭಾನುವಾರ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ನಡೆದ ಕನ್ನಡ ಕಡ್ಡಾಯ ನೇಮಕಾತಿ ಪರೀಕ್ಷೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೇದೆ ಧನರಾಜ್ ಎರಡು ಗಂಟೆ ತಡವಾಗಿ ಹಾಜರಾಗಿದ್ದು, ಅದನ್ನು ಪಿಎಸ್ಐ ಮಲ್ಲಮ್ಮ ಪ್ರಶ್ನಿಸಿದ್ದಾರೆ. ಅದಕ್ಕೆ ಪಿಎಸ್ಐ ಮಹಿಳಾ ಎಂಬುದನ್ನು ನೋಡದೇ ಮಹಿಳೆ ಕುತ್ತಿಗೆಯ ಭಾಗ ಹಿಡಿದು ಬೇವಿನ ಮರಕ್ಕೆ ಗುದ್ದಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಬ್ರಿಮ್ಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಇಬ್ಬರು ಗಂಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಹಲ್ಲೆಗೊಳಗಾದ ಪಿಎಸ್ಐ ಮಲ್ಲಮ್ಮ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಶಿಸ್ತಿನ ಕಾರಣಕ್ಕೆ ಪೇದೆ ಧನರಾಜ್ ಅವರನ್ನು ಅಮಾನತ್ತುಗೊಳಿಸಲಾಗಿದೆʼ ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದ್ದಾರೆ.