ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಜೋಡಿಕೆರೆಗಳ ಬಳಿ ಸುಮಾರು 45ರಿಂದ 50 ವರ್ಷಗಳಿಂದ ವಾಸವಾಗಿರುವ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳಿಗೆ ಮೂಲ ಸೌಕರ್ಯಗಳೇ ಇಲ್ಲ.
ಕೆರೆಯ ಪಕ್ಕದ ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆಗಳು, ದೊಡ್ಡ ಆರ್‌ಸಿಸಿ ಕಟ್ಟಡಗಳು ತಲೆ ಎತ್ತಿವೆ. ಸಮಾಜವೆಲ್ಲ ಆಧುನಿಕತೆ ಹಿಂದೆ ಓಡುತ್ತಿದ್ದರೂ ಈ ಸಮುದಾಯದ ಜನರಿಗೆ ಇರಲು ಸಣ್ಣ ಸೂರೂ ಇಲ್ಲ. ಇಂದಿಗೂ ಹಳೆ ಬಟ್ಟೆ, ಟಾರ್ಪಾಲಿನ್, ಗೋಣಿಚೀಲಗಳಿಂದ ಕಟ್ಟಿರುವ ಗುಡಿಸಲುಗಳೇ ಗಟ್ಟಿಯಾಗಿವೆ. ಈ ಮಧ್ಯೆ ವಿದ್ಯುತ್, ಶೌಚಾಲಯ, ಶುದ್ಧ ಕುಡಿಯುವ ನೀರು ದೂರದ ಮಾತಾಗಿದೆ. ಇಷ್ಟಿದ್ದರೂ ಸ್ಥಳೀಯ ಆಡಳಿತ ಮಾತ್ರ ಕಂಡೂ ಕಾಣದಂತೆ ಸುಮ್ಮನಿರುವುದು ವಿಪರ್ಯಾಸ.

ಮುಂಜಾನೆಯಿಂದ ಸಂಜೆಯವರೆಗೆ ಬೀಸುವ ಕಲ್ಲು ನಿರ್ಮಾಣ ಮಾಡುವುದು, ಭರಣಿ ಮಾಡುವುದು, ತಾಡಪತ್ರಿ ಮಾರುವುದು, ಪ್ಲಾಸ್ಟಿಕ್ ಆಯುವುದು ಇವರ ನಿತ್ಯದ ಕೆಲಸವಾಗಿದ್ದು, ಅವುಗಳ ಮಾರಾದಿಂದ ಬರುವ ಹಣದಲ್ಲಿ ದಿನ ದೂಡುವುದು ಇವೇ ಅಲ್ಲಿನ ಜನರ ದೈನಂದಿನ ದಿನಚರಿ.
ಟಾರ್ಪಾಲಿನ್ ಜೋಪಡಿಗಳಲ್ಲಿಯೇ ಹಲವು ವರ್ಷಗಳಿಂದ ಜೀವನ ನಡೆಸುತ್ತಿರುವ ಇವರಿಗೆ ಇದುವರೆಗೆ ಕುಡಿಯುವ ನೀರು ಸಹ ಸಿಗುತ್ತಿಲ್ಲ. ವಿದ್ಯುತ್ ಇಲ್ಲ, ನಿತ್ಯವೂ ಕತ್ತಲಿನಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ.
ಈ ಕುರಿತು ಇಲ್ಲಿ ವಾಸವಿರುವ ನಾಗಮ್ಮ ಈ ದಿನ ಡಾಟ್ ಕಾಮ್ ಜೊತೆ ಮಾತನಾಡಿ, “50 ವರ್ಷಗಳಿಂದ ಇಲ್ಲಿ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಓಟು ಹಾಕುತ್ತೇವೆ. ಕೆರೆಯ ಪಕ್ಕದಲ್ಲಿಯೆ ಇದ್ದರೂ ಯಾರು ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ. ದುಡ್ಡು ಕೊಟ್ಟು ನೀರು ತೆಗೆದುಕೊಳ್ಳುತ್ತೇವೆ. ಮೇಣದ ಬತ್ತಿ ಹಚ್ಚಿಕೊಂಡು ಜೀವನ ಮಾಡುತ್ತೇವೆ. ಚುನಾವಣೆ ವೇಳೆ ಮತ ಕೇಳಿಕೊಂಡು ಬರುತ್ತಾರೆ-ಹೋಗುತ್ತಾರೆ, ಆದರೆ ಯಾರೊಬ್ಬರೂ ಇಲ್ಲಿವರೆಗೆ ನಮಗೆ ಸ್ವಂತ ಜಾಗ ಕೊಟ್ಟಿಲ್ಲ. ಮನೆಯಂತೂ ಇಲ್ಲವೇ ಇಲ್ಲ” ಎಂದು ಅಳಲು ತೋಡಿಕೊಂಡರು.

“ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ಶಾಸಕ ಲಕ್ಷ್ಮಣ ಸವದಿಯವರು ಚುನಾವಣೆಯಲ್ಲಿ ಗೆದ್ದ ಬಳಿಕ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿ ಹೋದವರು, ಮರಳಿ ಬಂದಿಲ್ಲ. ಬೀಸುಕಲ್ಲು ಮಾಡಿ ಜೀವನ ಮಾಡುತ್ತೇವೆ. ನಾವು ಶಾಲೆಗೆ ಹೋಗಿಲ್ಲ. ನಮ್ಮ ಮಕ್ಕಳು ಶಾಲೆಗೆ ಹೋಗಿಲ್ಲ. ಸರ್ಕಾರವು ನಮಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಡಬೇಕು. ಮಕ್ಕಳ ಶಿಕ್ಷಣಕ್ಕೊಂದು ದಾರಿ ಮಾಡಿಕೊಡಬೇಕು” ಎಂದು ಶಾಸಕರಿಗೆ ಮನವಿ ಮಾಡಿದರು.
ಶಾಂತಾಬಾಯಿ ಮಾತನಾಡಿ, “ಮಳೆ ಗಾಳಿ ಎನ್ನದೆ ಜೋಪಡಿಯಲ್ಲಿ ಜೀವನ ಮಾಡುತ್ತೇವೆ. ಇಲ್ಲಿ ಕುಡಿಯುವ ನೀರಿಲ್ಲ. ಶೌಚಾಲಯವಿಲ್ಲ. ಮನೆ ನಿರ್ಮಾಣಕ್ಕೆ ಸ್ಥಳ ನೀಡುತ್ತೆವೆ ಎಂದು ಓಟು ಹಾಕಿಸಿಕೊಂಡು ಹೋಗುತ್ತಾರೆ. ಆದರೆ ಇಷ್ಟು ವರ್ಷಗಳಾದರೂ ಯಾರೂ ಸಮಸ್ಯೆ ಬಗೆ ಹರಿಸಿಲ್ಲ. ಶಾಸಕರು ಚುನಾವಣೆಯಲ್ಲಿ ಮಾತ್ರ ಬರುತ್ತಾರೆ ಆದರೆ ಚುನಾವಣೆ ನಂತರ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಹನಮವ್ವ ಮಾತನಾಡಿ, “ಓಟು ಕೊಟ್ಟು ಮೂರು ಬಾರಿ ಮೋದಿ ಗೆಲ್ಲಿಸಿದ್ದೇವೆ. ಅವರು ಏನು ಮಾಡಿಲ್ಲ. ಲಕ್ಷ್ಮಣ ಸವದಿಯವರು ಭರವಸೆ ಕೊಟ್ಟಿದ್ದಾರೆ. ಹಾಗೂ ಹೀಗೂ ಗೃಹಲಕ್ಷ್ಮೀ ಹಣ ಬರುತ್ತಿದೆ. ಜತೆಗೆ ತಾಡಪತ್ರಿ, ಬೀಸುಕಲ್ಲು ಮಾರುವುದರಿಂದ ಸ್ವಲ್ಪ ಹಣ ಬರುತ್ತಿದೆ. ಒಂದು ಹೊತ್ತಿನ ಊಟಕ್ಕೆ ಸರಿಯಾಗಿದೆ. ಅಕ್ಕಪಕ್ಕ ಕೆರೆ ಕಟ್ಟೆ.. ಹಾವು ಚೇಳು ಬಂದರೂ ಕೇಳೋರಿಲ್ಲ. ನಾವು ಸತ್ತರೂ ಕಣ್ಣೀರು ಹಾಕುವವರಿಲ್ಲ ಎಂದು ನಮ್ಮನ್ನ ಇಷ್ಟು ತಿರಸ್ಕರಿಸಿದ್ದಾರೆ. ನಾವಂತೂ ಓದಿಲ್ಲ. ಮಕ್ಕಳಾದರೂ ಓದಲಿ ಎಂದರೆ ಅದಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ದೊಡ್ಡ ದೊಡ್ಡವರು ಏನು ಮಾಡಿದರೂ ಸರಿ” ಎಂದು ಅಸಹಾಯಕರಾಗಿ ಹೇಳಿದರು.

ಇದನ್ನೂ ಓದಿ: ಅಥಣಿ | ಬಸ್ ನಿಲ್ದಾಣದಲ್ಲಿ ಅವಘಡ: ಮಹಿಳೆ ಸಾವು
ಸುಮಾರು ವರ್ಷಗಳಿಂದ ಜೋಪಡಿಗಳಲ್ಲಿ, ನೀರಿಲ್ಲದೆ, ಸರಿಯಾದ ಊಟ ಕೂಡ ಇಲ್ಲದೆ, ಕತ್ತಲೆಯಲ್ಲಿ ದಿನದೂಡುತ್ತಿರುವ ಪರಿಶಿಷ್ಟ ಸಮುದಾಯದ ಬಡ ಕುಟುಂಬಗಳ ಸಮಸ್ಯೆ ಕುರಿತು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಗಮನಹರಿಸಿ ಇವರ ಸಮಸ್ಯೆಯನ್ನು ಬಗೆಹರಿಸಲಿ ಎನ್ನುವದು ಈದಿನ ಡಾಟ್ ಕಾಮ್ ಆಶಯ. ಇನ್ನಾದರೂ ಸ್ಥಳೀಯ ಅಧಿಕಾರಿಗಳ, ಶಾಸಕರ ಕಣ್ಣು ತೆರೆಯುವುದೇ ಕಾದು ನೋಡಬೇಕು.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು