ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಕ್ಕೆ ಗುದ್ದಿ ಯುವಕನನ್ನು ಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಗುಬ್ಬಿ ಪಟ್ಟಣದ ತಹಶೀಲ್ದಾರ್ ಕ್ವಾಟ್ರಸ್ ಮುಂಭಾಗದ ಎಂ.ಜಿ.ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಳೆದೆರಡು ವರ್ಷದ ಹಿಂದೆ ಹತ್ಯೆಗೆ ಒಳಗಾದ ಜಿ.ಸಿ.ನರಸಿಂಹಮೂರ್ತಿ (ಕುರಿ ಮೂರ್ತಿ) ಅವರ ಎರಡನೇ ಪುತ್ರ ಜಿ.ಎನ್.ಮನೋಜ್(29) ಕೊಲೆ ಸಂಚಿನ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುವಕ ಎಂದು ಗುರುತಿಸಲಾಗಿದೆ.
ಗುಬ್ಬಿ ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನ ಸಮೀಪದಲ್ಲಿ ವಾಸವಿದ್ದ ಮನೆಯಿಂದ ಡಿಯೊ ಬೈಕಿನಲ್ಲಿ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಯುವಕ ಮನೋಜ್ ಮೇಲೆ ಸ್ಕಾರ್ಪಿಯೋ ಕಾರಿನ ಮೂಲಕ ಹತ್ಯೆಗೆ ಯತ್ನಿಸಲಾಗಿದೆ. ಹಳೇ ಕೆಇಬಿ ಕಟ್ಟಡ ಮುಂಭಾಗದ ರಸ್ತೆಯಲ್ಲಿ ಯುವಕನ ಆಗಮನಕ್ಕೆ ಕಾದು ನಿಂತಿದ್ದು, ಆ ಬಳಿಕ ಬೈಕ್ ಹಿಂಬಾಲಿಸಿ ಗುದ್ದಿ, ಹತ್ಯೆಗೆ ಯತ್ನಿಸಲಾಗಿದೆ. ಕೊಲೆ ಮಾಡುವ ಸಂಚು ಅರಿತ ಯುವಕ ಮನೋಜ್, ಸ್ಥಳದಿಂದ ಓಡಿ ಮಾರುತಿನಗರ ಬಡಾವಣೆಯ ಸಹೋದರನ ಮನೆಯಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ.

ಬೈಕಿಗೆ ಗುದ್ದಿದ ನಂತರ ಓಡಿಹೋದ ಮನೋಜ್‌ನನ್ನು ಬೆನ್ನತ್ತಿದ ಕಾರಿನಲ್ಲಿದ್ದವರು, ಆಶ್ರಯ ಪಡೆದ ಮನೆಯ ಮುಂದೆ ನಿಂತು ಕೊಲೆ ಮಾಡುವ ಸಂಚು ರೂಪಿಸಿದ್ದರು. ಕೂಡಲೇ ಮನೆಯಲ್ಲಿದ್ದವರು ಕೂಗಾಡಿದ್ದರಿಂದ ಕ್ಷಣಾರ್ಧದಲ್ಲಿ ಬಂದ ವೇಗದಲ್ಲೇ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಘಟನೆ ನಡೆದ ಕೂಡಲೇ ಗುಬ್ಬಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವ ಯುವಕ ಮನೋಜ್, “ಈ ಹಿಂದೆ ನನ್ನ ತಂದೆ ನರಸಿಂಹಮೂರ್ತಿ ಅವರ ಕೊಲೆ ನಡೆದಿತ್ತು. ಈಗ ಕಾರಿನಲ್ಲಿ ಅಪಘಾತ ಮಾಡುವ ರೀತಿ ನನ್ನ ಕೊಲೆ ಸಂಚು ರೂಪಿಸಿರುವ ಸಾಧ್ಯತೆ ಇದೆ. ಕೂಡಲೇ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಕ್ಷೌರ ಮಾಡಲು ನಿರಾಕರಿಸಿದ ಮುದುಕಪ್ಪ ಹಡಪದ್ ಆಸ್ತಿ ಮುಟ್ಟುಗೋಲು ಹಾಕಬೇಕು : ಮಾದಿಗ ಸಮುದಾಯ ಒತ್ತಾಯ
ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಮರಿಯಪ್ಪ, ಸಿಪಿಐ ಗೋಪಿನಾಥ್ ಸ್ಥಳ ಪರಿಶೀಲನೆ ನಡೆಸಿದರು. ತಂಡವೊಂದನ್ನು ರಚಿಸಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಸದಾಕಾಲ ಜನ ಸಂದಣಿ, ವಾಹನ ದಟ್ಟಣೆಯಿರುವ ಎಂ.ಜಿ.ರಸ್ತೆಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಸೇರಿದಂತೆ ತಹಶೀಲ್ದಾರ್ ವಸತಿ ಗೃಹ ಮುಂದೆ ಬೆಳಗ್ಗೆ ನಡೆದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
