ಹಾವುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಆ ಮೂಲಕ ಹಾವುಗಳ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಹಾವು ಸಂರಕ್ಷಕ ಗೊರವನಹಳ್ಳಿ ವಿದ್ಯಾ ಪ್ರಸಾದ್ ತಿಳಿಸಿದರು.
ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯ ಸ್ಪೂರ್ತಿಧಾಮ ಪಬ್ಲಿಕ್ ಶಾಲೆಯಲ್ಲಿ ನಡೆದ ಹಾವುಗಳ ಬಗ್ಗೆ ನಡೆಯುತ್ತಿರುವ ಹೊಸ ಸಂಶೋಧನೆಗಳ ಹಾಗೂ ಅದರಿಂದ ತಿಳಿದು ಬಂದ ಹೊಸ ತಿಳುವಳಿಕೆಯ ಬಗ್ಗೆ ತಿಳಿಸುವ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳೆಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ ಹಾವು ಕಚ್ಚಿದರೆ, ಕಚ್ಚಿದ ಭಾಗದಲ್ಲಿ ಇಂಟು ಮಾರ್ಕ್ ಹಾಕಿ, ಕಚ್ಚಿದ ಭಾಗಕ್ಕಿಂತ ಒಂದು ಅಡಿ ಮೇಲೆ ಹಗ್ಗದಲ್ಲಿ ಬಿಗಿದು ಕಟ್ಟುವ ರೂಢಿ ಏನಿತ್ತು ಅದು ತಪ್ಪು. ಆ ರೀತಿಯಲ್ಲಿ ಮಾಡುವಂತಿಲ್ಲ. ಅದರಿಂದ ಇನ್ನೂ ಅನಾಹುತ ಹೆಚ್ಚು ಆಗುತ್ತದೆ. ಮೆಡಿಕಲ್ ಪಠ್ಯವನ್ನೇ ಈಗಿನ ಸಂಶೋಧನೆಯಂತೆ ಬದಲಾಯಿಸಲು ಹೊರಟಿದ್ದಾರೆ ಗೊರವನಹಳ್ಳಿ ವಿದ್ಯಾ ಪ್ರಸಾದ್ ತಿಳಿಸಿದರು.

ಈಗಿನ ಸಂಶೋಧನೆಯಿಂದ ತಿಳಿದು ಬಂದ ಅರಿವು ಏನೆಂದರೆ, ಈ ಮೊದಲು ಹಾವು ಕಚ್ಚಿದ ಜಾಗದ ಒಂದು ಅಡಿ ಮೇಲೆ ರಕ್ತ ಆಡದಂತೆ ಹಗ್ಗದಿಂದ ಬಿಗಿದು ಕಟ್ಟುತ್ತಿದ್ದರು. ಹೀಗೆ ಕಟ್ಟುವುದರಿಂದಲೇ ಹೃದಯಾಘಾತ ಆಗುವ ಸಂಭವ ಹೆಚ್ಚು ಇರುತ್ತದೆ. ಬಿಗಿದು ಕಟ್ಟಿದ ಜಾಗದಲ್ಲಿ ಗ್ಯಾಂಗ್ರಿನ್ ಆಗುವ ಸಾಧ್ಯತೆ ಇದೆ. ಹೀಗೆ ಮಾಡದೆ ಹಾವು ಕಚ್ಚಿದ ತಕ್ಷಣ ಮಾಟ ಮಂತ್ರ ಮಾಡಿಸುತ್ತಾ ಸಮಯ ವ್ಯರ್ಥ ಮಾಡದೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಆ್ಯಂಟಿ ವೆನಂ ಕೊಡಿಸಬೇಕು ಎಂದರು.
ಹಾವು ಕಚ್ಚಿದ ಮೇಲೆ ಕಡಿಮೆ ಎಂದರೂ ಒಂದು ಗಂಟೆ ಅವಕಾಶ ಇರುತ್ತದೆ. ಗಾಬರಿ ಮಾಡಿಕೊಳ್ಳಬಾರದು ಇದರಿಂದ ರಕ್ತದ ಪರಿಚಲನೆ ಹೆಚ್ಚಾಗಿ ನಂಜು ಏರುತ್ತದೆ. ಹಾವು ಕಚ್ಚಿದಾಗ ಬಾಯಿ ಹಾಕಿ ರಕ್ತ ಹೊರ ತೆಗೆಯುವುದನ್ನು ಮಾಡಬಾರದು. ಬಾಯಿಯಲ್ಲಿ ಹುಣ್ಣು ಇತ್ಯಾದಿಗಳಿಂದ ಓಪನ್ ಇದ್ದರೆ ನಂಜು ಏರಿ ಅವರೇ ಮೊದಲು ಸಾಯುತ್ತಾರೆ. ಬಾಯಲ್ಲಿ, ನಾಲಿಗೆಯಲ್ಲಿ ಕೆಲವು ಅಂಶಗಳನ್ನು ಹೀರಿಕೊಳ್ಳುವ ಗುಣ ಇರುತ್ತದೆ. ಮೆದುಳು ಹಾಗೂ ಹೃದಯ ಹತ್ತಿರ ಇರುವುದರಿಂದ ಬೇಗ ನಂಜು ಏರಿ ಸಾವು ಬರುತ್ತದೆ. ಹಾವಿನ ವಿಷವನ್ನು ಸೇವನೆ ಮಾಡಿದರೆ ಏನು ಆಗುವುದಿಲ್ಲ. ಆದರೆ ರಕ್ತಕ್ಕೆ ಹೋದರೆ ಸಾವು ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಹಾವಿನ ದ್ವೇಷ 12 ವರುಷ ಅನ್ನುವುದೆಲ್ಲ ಸುಳ್ಳು. ಅದಕ್ಕೆ ಸಣ್ಣ ಮೆದುಳು ಇರುತ್ತದೆ. ಅದಕ್ಕೆ ಜ್ಞಾಪಕ ಶಕ್ತಿ ಕಡಿಮೆ, ಅದರ ಬದುಕು ಏನಿದ್ದರೂ 300 ಮೀಟರ್ ಪರಿಧಿಯಲ್ಲಿ ಅಷ್ಟೇ ಇರುತ್ತದೆ. ಯಾವುದಾದರೂ ಪ್ರಾಣಿ ಓಡಿಸಿಕೊಂಡು ಬಂದಾಗ ಗಾಬರಿಯಲ್ಲಿ ಅದರ ಪರಿಧಿಯನ್ನು ದಾಟಿ ಬಂದರೆ ತಿರುಗಿ ಅದೇ ಹಳೆಯ ಜಾಗಕ್ಕೆ ಹೋಗುವಷ್ಟು ನೆನಪು ಇರುವುದಿಲ್ಲ. ಅದು ಹೊಸ ಜಾಗ ಹುಡುಕಿಕೊಳ್ಳಬೇಕು” ಎಂದು ವಿದ್ಯಾಪ್ರಸಾದ್ ತಿಳಿಸಿದರು.
ಹಾವುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಅನಗತ್ಯ ಗಾಬರಿಯಿಂದ ಅವು ಕಂಡ ತಕ್ಷಣಕ್ಕೆ ಸಾಯಿಸುವುದು ಬೇಡ. ಹಾವುಗಳನ್ನು ಹಿಡಿದು ಪ್ರದರ್ಶಿಸುವುದು, ಹಾವಿನೊಡನೆ ಸರಸ ಆಡುತ್ತಾ ಮುತ್ತು ನೀಡುವ ಹುಚ್ಚಾಟಗಳನ್ನು ಮಾಡಬಾರದು. ವನ್ಯ ಜೀವಿ ಸಂರಕ್ಷಣಾ ಕಾಯಿದೆ ಪ್ರಕಾರ ತಪ್ಪಾಗುತ್ತದೆ. ಮಂಡ್ಯ ಜಿಲ್ಲೆಯನ್ನು ಹಾವು ಕಡಿತ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪಣ ತೊಡಬೇಕಿದೆ. ಮಾನವ-ಕಾಡು ಉಸಿರುಗಳ ಸಂಘರ್ಷ ತಪ್ಪಿಸಲು ಪಣ ತೊಡೋಣ ಎಂದು ಮಕ್ಕಳಿಗೆ ತಿಳುವಳಿಕೆ ಕೊಟ್ಟರು.

ಹಾವು ಜನವಸತಿ ಪ್ರದೇಶದಲ್ಲಿ ಕಂಡು ಬಂದಲ್ಲಿ ಕೊಲ್ಲದೆ ಹಾವಿನ ಮೇಲೆ ಗಮನವಿರಿಸಿ ಉರಗ ಮಿತ್ರರಿಗೆ ವಿಷಯ ಮುಟ್ಟಿಸಿದರೆ, ಬಂದು ಹಾವುಗಳ ಭಯ ದೂರವಾಗಿಸಿ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ ಎಂದು ವಿದ್ಯಾಪ್ರಸಾದ್ ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಶಿವರಾಜು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
