ತುರುವೇಕೆರೆ ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಬಿ.ಎಸ್.ನಂಜೇಶ್ ಗೌಡ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದಿದ್ದ ಯುವ ಕಾಂಗ್ರೆಸ್ ನ ಚುನಾವಣೆಯಲ್ಲಿ ನಂಜೇಶ್ ಗೌಡ ಅತಿಹೆಚ್ಚು ಮತಗಳಿಸುವ ಮೂಲಕ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.
ತುರುವೇಕೆರೆ ಬ್ಲಾಕ್ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಹಟ್ಟಿಹಳ್ಳಿಯ ಕಿರಣ್, ಸಿಎಸ್ ಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ನವೀನ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ.ಯೋಗೀಶ್ ಆಯ್ಕೆಯಾಗಿದ್ದಾರೆ.
ಈ ನಾಲ್ಕು ಮಂದಿಯನ್ನು ಅಭಿನಂದಿಸಿ ಮಾತನಾಡಿದ ವಿಧಾನಪರಿಷತ್ ನ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಕಾಂಗ್ರೆಸ್ ಪಕ್ಷ ಯುವಕರಿಗೆ ಆಧ್ಯತೆ ನೀಡಿದೆ. ರಾಹುಲ್ ಗಾಂಧಿಯವರು ಯುವಕರು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿರುವ ಅಬಲರಿಗೆ ಯುವಕರು ಶಕ್ತಿ ತುಂಬಬೇಕು ಎನ್ನುವ ಕಾರಣಕ್ಕೆ ಯುವಕರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ೫ ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಹೊಣೆ ಯುವ ಕಾಂಗ್ರೆಸ್ ನ ಪದಾದಿಕಾರಿಗಳಿಗೆ ಇದೆ. ಎಲ್ಲಾ ೫ ಯೋಜನೆಗಳು ಬಡವರ ಆಶಾಕಿರಣವಾಗಿದೆ. ಹಾಗಾಗಿ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಯೋಜನೆ ತಪ್ಪದೇ ತಲುಪಬೇಕು. ಯುವ ಪದಾದಿಕಾರಿಗಳು ಪಕ್ಷದ ಹಿತಕ್ಕಾಗಿ ಮತ್ತು ಬಡಜನರ ಉದ್ದಾರಕ್ಕಾಗಿ ದುಡಿಯಬೇಕು ಎಂದು ಬೆಮಲ್ ಕಾಂತರಾಜ್ ಕರೆ ನೀಡಿದರು.
ತಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದೆ. ಹಾಗಂತ ನಾನು ಹತಾಶನಾಗಿಲ್ಲ. ತುರುವೇಕೆರೆ ಕ್ಷೇತ್ರದಾದ್ಯಂತ ಸಂಚರಿಸಿ ಕಾಂಗ್ರೆಸ್ ಪಕ್ಷದ ಸಾಧನೆಗಳು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಲೇ ಇದ್ದೇನೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಬೆಮಲ್ ಕಾಂತರಾಜ್ ಮುಂಬರುವ ಚುನಾವಣೆಯಲ್ಲಿ ನೆಲಮಂಗಲ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇವೆಲ್ಲಾ ಸುಳ್ಳು. ನನ್ನ ಜನ್ಮಭೂಮಿ ನೆಲಮಂಗಲವೇ ಆದರೂ ಸಹ ನನ್ನ ಕರ್ಮಭೂಮಿ ತುರುವೇಕೆರೆ. ಹಾಗಾಗಿ ತಾವು ಯಾವುದೇ ಕಾರಣಕ್ಕೂ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಹೊರಹೋಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಧೃಢಗೊಳಿಸುವ ಕಾರ್ಯ ನಡೆಯಲಿದೆ. ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ಜೀವನೋಪಾಯದ ದಾರಿ ದೀಪವಾಗಿದೆ ಎಂದು ವಿಶ್ವಸಂಸ್ಥೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. ನೇರವಾಗಿ ಫಲಾನುಭವಿಗೇ ತಲುಪುತ್ತಿರುವುದು ಈ ಯೋಜನೆಗಳು ಯಶಸ್ವಿಯಾಗಲು ಕಾರಣವಾಗಿದೆ ಎಂದು ಬೆಮಲ್ ಕಾಂತರಾಜ್ ಹೇಳಿದರು.
ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣಾ ಪ್ರಚಾರಕ್ಕೆ ಬಂದ ಸಂಧರ್ಭದಲ್ಲಿ ತಾಲೂಕಿನ ಋಣ ತೀರಿಸಲು ಸಾಧ್ಯವಿಲ್ಲ. ನನ್ನ ಎರಡು ಕಣ್ಣುಗಳು ಇದ್ದಂತೆ, ಜೆಡಿಎಸ್ ನ ಭದ್ರಕೋಟೆ ಎಂದೆಲ್ಲಾ ಹಾಡಿ ಹೊಗಡಿ ಜನರಿಂದ ಮತಗಳಿಸಿಕೊಂಡಿದ್ದಾರೆ. ಆದರೆ ಈ ತಾಲೂಕಿಗೆ ಅವರ ಕೊಡುಗೆ ಏನೇನೂ ಇಲ್ಲ. ಕೂಡಲೇ ತಾಲೂಕಿಗೆ ಅವರು ಯಾವುದಾದರೂ ಕೈಗಾರಿಕೆಯನ್ನು ತರಲಿ. ತಾಲೂಕಿನಲ್ಲಿರುವ ಹಲವಾರು ಯುವಕರಿಗೆ ಉದ್ಯೋಗ ನೀಡಲಿ ಎಂದು ಕಿವಿಮಾತು ಹೇಳಿದರು.
ತಾಲೂಕಿನ ಅಮ್ಮಸಂದ್ರದ ಸಿಮೆಂಟ್ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದೆ. ಆ ಕಾರ್ಖಾನೆಗೆ ಪುನಶ್ಚೇತನ ನೀಡಬೇಕು. ಇಲ್ಲವೇ ಅಲ್ಲಿರುವ ಸಾವಿರಾರು ಎಕರೆ ಭೂಮಿಯನ್ನು ಬಳಸಿಕೊಂಡು ಬೇರೆ ಯಾವುದಾದರೂ ಕಾರ್ಖಾನೆಯನ್ನು ಪ್ರಾರಂಭಿಸಬೇಕೆಂದು ಬೆಮಲ್ ಕಾಂತರಾಜ್ ಆಗ್ರಹಿಸಿದರು.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶ್ರೀರಂಗಪಟ್ಟಣ – ಬೀದರ್ ರಸ್ತೆ ಕಾಮಗಾರಿ ಚುರುಕುಗೊಳಿಸಬೇಕು ಮತ್ತು ಎಡಿಯೂರು ತಿಪಟೂರು ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಲು ಕೇಂದ್ರದ ರೈಲ್ವೆ ಸಚಿವರೂ ನಮ್ಮ ಜಿಲ್ಲೆಯೂ ಸಂಸದರೂ ಆಗಿರುವ ವಿ.ಸೋಮಣ್ಣನವರು ಇತ್ತ ಗಮನಹರಿಸಬೇಕೆಂದು ಬೆಮಲ್ ಕಾಂತರಾಜ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜ್, ಮುಖಂಡರಾದ ಸುಬ್ರಮಣಿ ಶ್ರೀಕಂಠೇಗೌಡ, ಪಟ್ಟಣ ಪಂಚಾಯ್ತಿ ಸದಸ್ಯ ಯಜಮಾನ್ ಮಹೇಶ್, ಟಿ.ಎಸ್. ಶ್ರೀನಿವಾಸ್, ಮಾಜಿ ಸದಸ್ಯ ಟಿ.ಎನ್.ಶಶಿಶೇಖರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೀಕಾಂತ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕೆಂಪರಾಜ್, ಸೇವಾದಳದ ಅಧ್ಯಕ್ಷ ಕೊಂಡಜ್ಜಿ ಶಿವಕುಮಾರ್, ಮಾವಿನಹಳ್ಳಿ ಮಹಲಿಂಗಯ್ಯ,ಗೊಟ್ಟೀಕೆರೆ ನಾರಾಯಣಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ವರದಿ – ಎಸ್. ನಾಗಭೂಷಣ್ ತುರುವೇಕೆರೆ