ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ ರೂಪಿಸಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಿಯಕುಮಾರ ಸೂರಕೆ ಹೇಳಿದರು.
ಬಾಗಲಕೋಟೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಹಾರಾಷ್ಟ್ರದ ಸಾತರಾದಲ್ಲಿ ಚುನಾವಣೆ ಕಾಲಕ್ಕೆ 41 ಲಕ್ಷ ಮತದಾರರ ಸೇರ್ಪಡೆ, ಬಿಹಾರ್ ಚುನಾವಣೆಯಲ್ಲಿ 68 ಲಕ್ಷ ಮತದಾರರ ಹೆಸರು ರದ್ದುಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಲೋಕಸಭೆ ಪತಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಹದೇವಪುರ ಕ್ಷೇತ್ರದಲ್ಲಿ 80,000 ಮತದಾರರನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ. ಈ ಅಕ್ರಮಗಳ ಬಗ್ಗೆ ಸಮಿತಿಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ” ಎಂದು ತಿಳಿಸಿದರು.
“ಪ್ರಚಾರ ಸಮಿತಿಯಿಂದ ರಾಜ್ಯಾದ್ಯಂತ ಪಕ್ಷ ಸಂಘಟಿಸಲಾಗುತ್ತದೆ. 36 ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ನೇಮಿಸಲಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ ಅದಕ್ಕೂ ಮೊದಲೇ ಸಮಿತಿ ಚಟುವಟಿಕೆ ನಡೆಸುತ್ತದೆ. ಬ್ಲಾಕ್ ಮಟ್ಟದಿಂದ ಬೂತ್ ವರೆಗೆ ಸದಸ್ಯರನ್ನು ನೇಮಿಸಲಾಗುತ್ತದೆ. ಸಮಿತಿಯಲ್ಲಿ ರಾಜ್ಯದ ಮೂರು ಲಕ್ಷ ಸದಸ್ಯರ ನೇಮಕದ ಗುರಿ ಹೊಂದಿದ್ದೇವೆ” ಎಂದು ತಿಳಿಸಿದರು.
“ರಾಹುಲ್ ಗಾಂಧಿ ಅವರು ಅಕ್ರಮಕ್ಕೆ ಸಮರ್ಪಕ ದಾಖಲೆ ಒದಗಿಸಿದ್ದಾರೆ. ಆದರೂ ಆಯೋಗ ದಾಖಲೆ ಕೊಡಿ ಎನ್ನುತ್ತಿದೆ, ಇದರಿಂದ ಆಯೋಗ ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತದೆ ಎಂಬುದು ಗೊತ್ತಾಗುತ್ತದೆ. ಧರ್ಮಸ್ಥಳ ವಿಷಯದ ಬಗ್ಗೆ ಎಸ್ಐಟಿಯಿಂದ ತನಿಖೆ ನಡೆಯುತ್ತಿದೆ. ಆರೋಪ ಮಾಡಿದವರು ಸಂಘದ ಕಾರ್ಯಕರ್ತರು, ದೇವಸ್ಥಾನದ ಪರವಾಗಿ ಮಾತನಾಡುತ್ತಿರುವವರು ಬಿಜೆಪಿಯವರು. ಆದರೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾತ್ರ ಈ ವಿಷಯದ ಬಗ್ಗೆ ಮೌನ ತಾಳಿದ್ದಾರೆ” ಎಂದರು.
ಇದನ್ನೂ ಓದಿ: ಬಾಗಲಕೋಟೆ | ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಸಭೆ
“ಸಮಾಜವಾದ, ಜಾತ್ಯತೀತ ಪದ ಸಂವಿಧಾನದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗುತ್ತಿದೆ. ಸಂವಿಧಾನದ ತಿರುಳು ಸಮಾಜವಾದವಾಗಿದೆ. ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನಿಲುವಿಗೆ ಹೋರಾಟದ ಮೂಲಕ ತಕ್ಕ ಉತ್ತರ ಕೊಡುತ್ತೇವೆ. ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗೆ ಬಿಟ್ಟಿ ಗ್ಯಾರಂಟಿ ಎಂದು ಗುರುತಿಸಲಾಯಿತು. ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ ಆರು ತಿಂಗಳಿನಲ್ಲಿ ಯೋಜನೆ ಜಾರಿಗೊಳಿಸಿತು. ಸದ್ಯ ರಾಜ್ಯದ ಜನರು ತಲ ಆದಾಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ” ಎಂದು ಸಮರ್ಥಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಅಬ್ದುಲ್ ಮುನೀರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಸರನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್ ಜಿ ನಂಜಯ್ಯನ ಮಠ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಶರಣಪ್ಪ ಕೋಟಗಿ, ಪಿ ಕೆ ನೀಲಕಟ್ಟಿ ಇದ್ದರು.