ಗ್ರಾಮೀಣ ಪ್ರದೇಶದಲ್ಲಿ ಮನರೇಗಾ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಡಿ ಕೆಲಸ ನೀಡುವಂತೆ ಆಗ್ರಹಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯಿಂದ ಬಾಗಲಕೋಟೆ ಜಿಲ್ಲೆಯ ನಂದವಾಡಗಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಮನರೇಗಾ ಅಡಿ ಕಾರ್ಯ ನಿರ್ವಹಿಸುವ ಮನರೇಗಾ ರೈತ ಕಾರ್ಮಿಕರು ಕೆಲಸಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು.
“ಮಳೆಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಆಶ್ರಯವಾಗಿರುವ ಉದ್ಯೋಗ ಖಾತರಿ ಯೋಜನೆಯ ಕೆಲಸಗಳು ಹಲವಾರು ಸಮಸ್ಯೆಗಳಿಂದ ಸರಿಯಾದ ಸಮಯಕ್ಕೆ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲು ಗ್ರಾಮ ಪಂಚಾಯತಿಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಕೆಲಸ ನಿರ್ವಹಿಸಿದ ಹಣವನ್ನು ಕೂಡಲೇ ಸಂದಾಯ ಮಾಡಬೇಕು. ಮತ್ತೆ ಕಾಲಕಾಲಕ್ಕೆ ಕೆಲಸವನ್ನು ಕೊಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ತಡೆಗಟ್ಟಬೇಕು. ಕೂಲಿ ಕಾರ್ಮಿಕರನ್ನು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಅನಾಗರಿಕತೆಯಿಂದ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
“ಒಂದು ವರ್ಷದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ಕೆಲಸ ನಡೆದಿವೆ, ಅವುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು. ಗ್ರಾಮ ಪಂಚಾಯಿತಿಯ ಅಧಿಕಾರಿಗಳ ದುರ್ವರ್ತನೆ ತಡೆಗಟ್ಟಬೇಕು” ಎಂಬುದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಮೀನಿಗೆ ತೆರಳಿದ್ದ ರೈತನ ಮೇಲೆ ಕರಡಿ ದಾಳಿ
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಒಕ್ಕೂಟದ ಸದಸ್ಯೆ ರೇಣುಕಾ ಬೂದಿಹಾಳ, ಅಮರೇಶ ಕುಂಬಾರ, ರೇಣುಕಾ ವಗ್ಗರ, ಲಕ್ಷ್ಮಿಪಾಗದ, ಖಾಜಾ ಬಿ ವಾಲಿಕಾರ, ಗಂಗಮ್ಮ ಪಾಗದ, ಸಾವಿತ್ರಿ ಕುಂಬಾರ, ಜುಬೇದಾ ಇಳಕಲ್, ಬಂದೇನವಾಜ್ ಮುಜಾವರ, ನಾಗರಾಜ ಪಂತ್ಗಾರ, ಬೇಗ ಮುಜವಾರ, ಜುಬೇಧಾ ಹುಳಗೇರಿ, ದಾವಲಂಬಿ ಇಳಕಲ್ ಸೇರಿದಂತೆ ಇತರರು ಇದ್ದರು.
