ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಾಗರ್ ಬಣ) ತಾಲೂಕು ಸಮಿತಿ ನೇತೃತ್ವದಲ್ಲಿ ಕುಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.
ಸಮಿತಿಯ ರವಿ ಸುತಾರ ಮಾತನಾಡಿ, “ಶೌಚಾಲಯ ಸ್ವಚ್ಛತೆ ಹಾಗೂ ದುರಸ್ತಿ, ಶುದ್ಧ ಕುಡಿವ ನೀರು, ಚರಂಡಿ ಸ್ವಚ್ಛತೆ, ಬೀದಿದೀಪ ವ್ಯವಸ್ಥೆ, ಎಲ್ಲ ಶಾಲೆಗಳಿಗೆ ಶುದ್ದ ಕುಡಿವ ನೀರು ಸೇರಿದಂತೆ ಅನೇಕ ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ. ಇದಕ್ಕೆ ಸದಸ್ಯರ ನಿರ್ಲಕ್ಷ್ಯವೇ ಕಾರಣ” ಎಂದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ, ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ಮಹಾದೇವಿ ಮಠಪತಿ, ಸಮಸ್ಯೆ ಪರಿಹರಿಸಿ ಸೌಕರ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೆ. ಎನ್ ರಾಜಣ್ಣ ಬಡವರ ಮನುಷ್ಯ : ಬರಗೂರು ರಾಮಚಂದ್ರಪ್ಪ
ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ಶಂಕರ ಹೊಸಮನಿ, ಸಾಕ್ಷಿ ಸಮಯ, ರಮೇಶ ಜಂಬಗಿ, ಅಣ್ಣಪ್ಪ ಕಾಂಬ್ಳೆ, ಹಣಮಂತ ಕಾಂಬ್ಳೆ, ರಾಜು ಗುಡ್ಡಿ, ಸದಾಶಿವ ದಡ್ಡಿಮನಿ, ಮುದಕಪ್ಪ ಸುತಾರ್ ಇದ್ದರು.