ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ಎಷ್ಟು ಪ್ರಾಮುಖ್ಯತೆ ಕೊಟ್ಟಿರುತ್ತದೆಯೋ, ಅಷ್ಟೆ ಪ್ರಾಮುಖ್ಯತೆಯನ್ನು ಕ್ರೀಡೆಗೂ ಕೊಟ್ಟಿರುತ್ತದೆ. ಹಾಗಾಗಿ ಪ್ರತಿಯೊಂದು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಗೋಸ್ಕರ ವಿಶಾಲವಾದ ಆಟದ ಮೈದಾನ ಇರುತ್ತದೆ. ಆದರೆ ಈ ಆಟದ ಮೈದಾನವನ್ನು ಹೊರಗಿನ ಖಾಸಗಿ ವ್ಯಕ್ತಿಗಳು ಜಮೀನನ್ನಾಗಿ ಮಾರ್ಪಡಿಸಿಕೊಂಡು ಅದರಲ್ಲಿ ಕೃಷಿ ಮಾಡುತ್ತಿದ್ದುದರಿಂದ ವಿದ್ಯಾರ್ಥಿಗಳಿಗೆ ಆಟದ ಮೈದಾನ ಇದ್ದೂ ಇಲ್ಲದಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಬಾಲಕರ ಸರ್ಕಾರಿ ಪಿ ಬಿ ಕಾಲೇಜಿನಲ್ಲಿ ಇಂತಹ ಘಟನೆ ನಡೆದಿದೆ. ವಿದ್ಯಾರ್ಥಿಗಳು ಆಟ ಆಡುವ ಮೈದಾನವನ್ನು ಹೊರಗಿನ ಖಾಸಗಿ ವ್ಯಕ್ತಿಗಳು ಕೃಷಿಗೆ ಬಳಕೆ ಮಾಡಿಕೊಂಡು ಲಾಭ ಪಡೆಯುತ್ತಿದ್ದಾರೆ. ಇದರಿಂದ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ದೈಹಿಕ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಹಾಗೂ ಪಟ್ಟಣದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೂರು ವರ್ಷಗಳ ಹಿಂದೆಯೇ ಜಮಖಂಡಿ ಸಂಸ್ಥಾನದ ಮಹಾರಾಜರು ಪಟ್ಟಣದಲ್ಲಿ ಶಾಲಾ ಕಾಲೇಜನ್ನು ಸ್ಥಾಪನೆ ಮಾಡಿದ್ದರು. ಅದುವೇ ಪಿ ಬಿ ಕಾಲೇಜು. ಆದರೆ ಈ ಕಾಲೇಜು ಈಗ ಹೊರಗಿನ ಖಾಸಗಿ ವ್ಯಕ್ತಿಗಳಿಂದ ವಿದ್ಯಾರ್ಥಿಗಳ ಪಾಲಿಗೆ ಕ್ರೀಡೆ ಎಂಬುದು ಮರೀಚಿಕೆಯಾಗುತ್ತಿದೆ.
ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರ ಬೇಜವಾಬ್ದಾರಿತನದಿಂದಾಗಿ ಕಾಲೇಜಿನ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ಕೃಷಿ ಮಾಡುತ್ತಿದ್ದಾರೆ. ಕಟ್ಟಡ ಕಟ್ಟಿತ್ತಿದ್ದಾರೆ. ಈ ಕುರಿತು ಪ್ರಾಚಾರ್ಯರಲ್ಲಿ ಪ್ರಶ್ನಿಸಿದರೆ ಅವರು ಯಾವುದೇ ಉತ್ತರ ನೀಡದೆ ಜಾರಿಕೊಳ್ಳುತ್ತಿದ್ದಾರೆ.
ಆಟದ ಮೈದಾನವನ್ನು ಕೃಷಿ ಪ್ರದೇಶವಾಗಿ ಮಾಡಿಕೊಂಡಿರುವವರು ಕಾಲೇಜಿನ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದು, “ಕೃಷಿ ಜಾಗಕ್ಕೆ ಕಾಲಿಟ್ಟರೆ ಕಾಲನ್ನೇ ಕತ್ತರಿಸುತ್ತೇವೆಂದು ಬೆದರಿಸುತ್ತಿದ್ದಾರೆ. ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಗಮನಕ್ಕೆ ತಂದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ” ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಬಿರಾದಾರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಕುರಿತು ನಮ್ಮ ಗಮನಕ್ಕೆ ಬಂದಿದ್ದು, ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೃಹತ್ ಭೂ ಹಗರಣ | ಒತ್ತಾಯದ ಲೋಕಾಯುಕ್ತ ದಾಳಿ; ತನಿಖೆಗೆ ಸಿಪಿಐಎಂ ಆಗ್ರಹ
ಜಮಖಂಡಿ ಶಾಸಕ ಜಗದೀಶ ಗುಡಗಿಂಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿಷಯದ ಕುರಿತು ಕಾಲೇಜಿನಿಂದ ಮಾಹಿತಿ ಪಡೆದು ಖಂಡಿತವಾಗಿ ಸೂಕ್ತ ಕ್ರಮ ತಗೆದುಕೊಳ್ಳುವೆ” ಎಂದು ಭರವಸೆ ನೀಡಿದ್ದಾರೆ.
“ಇಲ್ಲಿಯ ಅಧಿಕಾರಿಗಳು, ಶಾಸಕರು, ಸರ್ಕಾರಿ ಪಿ ಬಿ ಕಾಲೇಜು ಮೈದಾನ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಬಿಡಿಸಿ ಸರ್ಕಾರಿ ಜಾಗವನ್ನು ಉಳಿಸಿಕೊಳ್ಳುವತ್ತ ಮುಂದಾಗಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.