ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿರುವ ಅಕ್ರಮ ನೇಮಕಾತಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಜಮಖಂಡಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
“ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನೇಮಕಾತಿ ಕರೆಯಲಾಗಿತ್ತು. ಇಲ್ಲಿ ಯಾವುದೇ ಮಾನದಂಡಗಳನ್ನು ಪರಿಗಣಿಸದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ತಮಗೆ ಬೇಕಾದ ಅಭ್ಯರ್ಥಿಗಳಿಂದ ಹಣ ಪಡೆದು ನೇಮಕ ಮಾಡಿಕೊಂಡಿದ್ದಾರೆ” ಎಂದು ಪರೀಕ್ಷಾರ್ಥಿ ಅರ್ಜುನ ಮರನೂರು ಆರೋಪಿಸಿದರು.
“ಕೊಣ್ಣೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪೂರ್ವ ನಿರ್ಧರಿತ ರೀತಿಯಲ್ಲಿ ನಡೆದಿರುವ ಸಿಬ್ಬಂದಿ ನೇಮಕಾತಿಯನ್ನು ಕೂಡಲೇ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಪರೀಕ್ಷಾರ್ಥಿ ಅರ್ಜುನ ಮರನೂರು ಮಾತನಾಡಿ, “ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಎರಡು ಕಂಪ್ಯೂಟರ್ ಆಪರೇಟರ್, 3 ಕ್ಲರ್ಕ್ ಹುದ್ದೆ, 1 ಸಿಪಾಯಿ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಲಿಖಿತ ಪರೀಕ್ಷೆ ಹಾಗೂ ಮೌಕಿಕ ಸಂದರ್ಶನವೂ ಇತ್ತು. ಆದರೆ ಇಲ್ಲಿ ಆಡಳಿತ ಕಮಿಟಿ ಅಧ್ಯಕ್ಷರು, ನಿರ್ದೇಶಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಮಗೆ ಬೇಕಾದ ಅಭ್ಯರ್ಥಿಗಳ ಕಡೆಯಿಂದ ತಲಾ ₹15 ಲಕ್ಷ ಲಂಚ ತೆಗೆದುಕೊಂಡು ಅವರನ್ನು ಆಯ್ಕೆ ಮಾಡಿದ್ದಾರೆ” ಎಂದು ಆರೋಪಿಸಿದರು.
ದಲಿತ ಮುಖಂಡ ಶಿವಾನಂದ ಬಬಲೇಶ್ವರ ಮಾತನಾಡಿ, “ನಮ್ಮ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ವಿಶ್ವವಿದ್ಯಾಲಯಗಳು ಇದ್ದು, ಅವುಗಳಿಗೆ ಕೊಡದೆ, ಮಂಡ್ಯ ವಿಶ್ವವಿದ್ಯಾಲಯವನ್ನು ಪರೀಕ್ಷೆ ನಡೆಸಲು ಆಯ್ಕೆ ಮಾಡಿಕೊಂಡಿದ್ದು ಸಂಶಯಾಸ್ಪದವಾಗಿದೆ. ಹಾಗೆ ಪರೀಕ್ಷೆಯನ್ನು ನಡೆಸಲು ವಿಶ್ವವಿದ್ಯಾಲಯ ಆಯ್ಕೆ ಮಾಡುವಾಗ ಪಾರದರ್ಶಕವಾಗಿ ಸ್ಥಳೀಯರಿಗೆ ಹಾಗೂ ಊರಿನ ಪ್ರಮುಖರಿಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಕೊಣ್ಣೂರ ಗ್ರಾಮದ ಸ್ಥಳಿಯ ವಾಟ್ಸಪ್ ಗ್ರೂಪ್‌ಗಳು ಸಾಕಷ್ಟು ಇದ್ದು, ನೇಮಕಾತಿ ಪ್ರಕ್ರಿಯೆ ಬಗ್ಗೆ ಪ್ರಚಾರ ಮಾಡದೇ ಗುಪ್ತವಾಗಿ ಇಡಲಾಗಿತ್ತು. ಸಂಘದ ಎಲ್ಲ ಶೇರುದಾರರಿಗೆ ಮಾಹಿತಿ ನೀಡಿರುವುದಿಲ್ಲ” ಎಂದರು.
ದಲಿತ ಮುಖಂಡ ವಿಜಯ ಛಲವಾದಿ ಮಾತನಾಡಿ, “ಸಿಬ್ಬಂದಿ ನೇಮಕಾತಿ ಮಾಡಿಕೊಂಡಿರುವುದು ಸಂಶಯಾಸ್ಪದವಾಗಿದೆ. ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಳೆಯ ಸಿಬ್ಬಂದಿಗೆ ಮುಂಬಡ್ತಿ ಹುದ್ದೆ ನೀಡದೆ ಹೊಸಬರನ್ನು ನೇರವಾಗಿ ಆಯ್ಕೆ ಮಾಡಿಕೊಂಡಿದ್ದು, ಸಹಕಾರ ಇಲಾಖೆಯ ನಿಯಮಕ್ಕೆ ವಿರುದ್ಧವಾಗಿದೆ. ಕೀ ಉತ್ತರಗಳನ್ನು ಬಿಡುಗಡೆ ಮಾಡಿದ ಬಳಿಕ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ನಿಯಮದಲ್ಲಿ ಅವಕಾಶ ಕೊಡಲಾಗುತ್ತದೆ. ಆದರೆ, ಇಲ್ಲಿ ಏಕ ಅವಕಾಶ ಕೊಟ್ಟಿರುವುದಿಲ್ಲ. ಒಟ್ಟಾರೆಯಾಗಿ ಇಡೀ ನೇಮಕಾತಿ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ಕೂಡಲೇ ಸೂಕ್ತ ತನಿಖೆ ನಡೆಸಿ ಮರು ಪರೀಕ್ಷೆ ನಡೆಸಬೇಕು. ನಮ್ಮ ಹೋರಾಟಕ್ಕೆ ಸೂಕ್ತ ಸ್ಪಂದನೆ ಸಿಗದಿದ್ದರೆ ಜಿಲ್ಲಾಡಳಿತದ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಂಕಟಗಳಿಗೆ ಧ್ವನಿಯಾಗುವ ಕಲಾ ಮಾಧ್ಯಮ ಸಿನಿಮಾ : ಗಿರೀಶ್ ಕಾಸರವಳ್ಳಿ
ಈ ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಮಲ್ಲಪ್ಪ ಹೊರಟ್ಟಿ, ಭೀಮಪ್ಪಸುಣಗಾರ, ಗ್ರಾಮ ಪಂಚಾಯತಿ ಸದಸ್ಯ ಗದಿಗೆಪ್ಪ ಧಾರವಾಡ, ಭೀರಪ್ಪ ಎಣ್ಣಿ, ಕರೇಪ್ಪ ಮೇತ್ರಿ ಸೇರಿದಂತೆ ಪರೀಕ್ಷಾರ್ಥಿಗಳು ಇದ್ದರು.
ವರದಿ: ಜಮಖಂಡಿ ಸಿಟಿಜನ್ ಜರ್ನಲಿಸ್ಟ್ ಮಹದೇವ ಕುಂಚನೂರು