ಕವಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಜಮಖಂಡಿ ತಾಲೂಕು ಕಸಾಪ ಅಧ್ಯಕ್ಷರ ನಡೆ ಖಂಡನೀಯ ಎಂದು ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಈರಪ್ಪ ಸುತಾರ್ ಅಸಮಾಧಾನ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಮಾತನಾಡಿದ ಅವರು, “ಜಮಖಂಡಿ ಪಟ್ಟಣದಲ್ಲಿ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಮುಂಚಿತವಾಗಿ ಕವಿತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಬೇಕು. ಇದನ್ನು ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಿ, ಆಯ್ಕೆ ಸಮಿತಿಯವರು ಶಿಫಾರಸು ಮಾಡಿರುವವರಿಗೆ ಮಾತ್ರ ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಲು ಅವಕಾಶ ನೀಡಲಾಗುವುದೆಂಬ ದೋರಣೆ ಸರಿಯಲ್ಲ” ಎಂದರು.
“ತಾಲೂಕು ಕಸಾಪ ಅಧ್ಯಕ್ಷರ ನಡೆ, ಅಹಂಕಾರದ ದರ್ಪ ಸರ್ವಾಧಿಕಾರದ ದೋರಣೆಯಾಗಿದೆ. ಇದನ್ನು ಕವಿಗಳ ಪರವಾಗಿ ನಾನು ಬಲವಾಗಿ ಖಂಡಿಸುತ್ತೇನೆ. ಅಧ್ಯಕ್ಷರ ಈ ದೋರಣೆ ಇದೇ ಮೊದಲಲ್ಲ. ಕಳೆದ ಬಾರಿ ನಡೆದ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಗೌರವಧನವನ್ನು ನೀಡದೆ ಅವಮಾನ ಮಾಡಿದ್ದಾರೆ” ಎಂದು ಆರೋಪಿಸಿದರು.
“8ನೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಕಾರಣಕ್ಕೆ ಈ ಬಾರಿ ನನಗೆ ಯಾವುದೇ ಲಿಖಿತ ಹಾಗೂ ಮೌಖಿಕ ಸೂಚನೆ ನೀಡದೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಧ್ಯಮ ಪ್ರತಿನಿಧಿ ಹುದ್ದೆಯಿಂದ ತೆಗೆದುಹಾಕಿ ಅವಮಾನ ಮಾಡಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪತ್ರಿಕಾ ವಿತರಕರ ಸಂಘಟನೆಯ ಹೋರಾಟಕ್ಕೆ ಸರ್ಕಾರ ಸ್ಪಂದನೆ: ರಾಜ್ಯಾಧ್ಯಕ್ಷ ಶಂಭುಲಿಂಗ
“ಈ ರೀತಿ ನಾಡಿನ ಸಾಹಿತ್ಯ, ಸಂಸ್ಕೃತಿಯ ರಾಯಭಾರಿಗಳಾಗಿರುವ ಕವಿ ಹಾಗೂ ಸಾಹಿತಿಗಳಿಗೆ ಜಮಖಂಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅವಮಾನ ಮಾಡಿದ್ದಾರೆ. ಹಾಗಾಗಿ ಜಮಖಂಡಿ ತಾಲೂಕಿನ ಕಸಾಪ ಅಧ್ಯಕ್ಷರು ತಮ್ಮ ತಪ್ಪನ್ನು ತಿದ್ದಿಕೊಂಡು, ಸಾಹಿತಿಗಳಲ್ಲಿ ಹಾಗೂ ಬರಹಗಾರರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಹಿರಿಯ ಸಾಹಿತಿಗಳನ್ನು ಒಳಗೊಂಡು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.