ತಡವಾಗಿ ಮಾನ್ಸೂನ್ ಮಾರುತಗಳು ರಾಜ್ಯ ಪ್ರವೇಶಿಸಿವೆ. ಆದರೂ, ಮಳೆ ಕಣ್ಮರೆಯಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಹನಿ ಇನ್ನೂ ಭೂಮಿಗೆ ಬಿದ್ದಿಲ್ಲ. ಹೀಗಾಗಿ, ಮಳೆ ಆಧಾರಿತ ಕೃಷಿಯನ್ನೇ ನಂಬಿದ್ದ ಜನರು ಬರದ ಆತಂಕದಲ್ಲಿದ್ದಾರೆ. ಕೂಲಿ ಕೆಲಸ ಹರಸಿ ಊರನ್ನೇ ತೊರೆಯುತ್ತಿದ್ದಾರೆ.
ಇಂಥದೊಂದು ಸನ್ನಿವೇಶಕ್ಕೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಲಿಂಗಾಪುರ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ದುಡಿಯುವ ವಯಸ್ಸಿನ ಪುರುಷರು-ಮಹಿಳೆಯರು ಉದ್ಯೋಗ ಹರಸಿ ನಗರಗಳತ್ತ ಗುಳೆ ಹೋಗುತ್ತಿದ್ದಾರೆ. ವೃದ್ಧರಷ್ಟೇ ಗ್ರಾಮದಲ್ಲಿ ಕಾಣಸಿಗುತ್ತಿದ್ದಾರೆ.
ಗ್ರಾಮದಲ್ಲಿ 300ಕ್ಕೂ ಅಧಿಕ ಮನೆಗಳಿದ್ದು, ಸುಮಾರು 2,000 ಜನಸಂಖ್ಯೆಯಿದೆ. ಗ್ರಾಮದ ಬಹುತೇಕರು ರೈತರು ಮತ್ತು ಕೃಷಿ ಕಾರ್ಮಿಕರು. ನೀರಾವರಿ ಸೌಲಭ್ಯವಿಲ್ಲದ ಗ್ರಾಮದಲ್ಲಿ ಕೃಷಿಗೆ ಮಳೆ ನೀರೇ ಆಧಾರ. ಆದರೆ, ಈ ವರ್ಷ ಗ್ರಾಮದಲ್ಲಿ ಮಳೆ ಸುರಿದಿಲ್ಲ. ಕೃಷಿ ಮಾಡಲು ನೀರಿಲ್ಲದ ಕಾರಣ, ಮುಂಗಾರು ಬಿತ್ತನೆ ಆರಂಭವೇ ಆಗಿಲ್ಲ. ಇನ್ನು, ಮನರೇಗಾ ಅಡಿಯಲ್ಲಿಯೂ ಸರಿಯಾಗಿ ಕೂಲಿ ಕೆಲಸ ಸಿಗದೆ ಬೇಸತ್ತಿರುವ ಗ್ರಾಮದ ಜನರು ತಮ್ಮ ಮನೆಗಳಿಗೆ ಬೀಗ ಜಡಿದು, ನಗರಗಳತ್ತ ಮುಖ ಮಾಡಿದ್ದಾರೆ.
ಈಗಾಗಲೇ ಗ್ರಾಮದ 80% ಮಂದಿ ಊರು ತೊರೆದಿದ್ದಾರೆ. ಹಿರಿಯ ಜೀವಗಳು ಊರಿನಲ್ಲಿವೆ. ಅವರೊಂದಿಗೆ ಒಂದಷ್ಟು ಮಂದಿ ಪ್ರಾಯದವರಿದ್ದಾರೆ. ಒಬ್ಬನೇ ಒಬ್ಬ ಯುವಕನೂ ಗ್ರಾಮದಲ್ಲಿ ಕಾಣ ಸಿಗುವುದಿಲ್ಲವೆಂದು ಟಿವಿ9 ವರದಿ ಮಾಡಿದೆ.