ಬಾಗಲಕೋಟೆಯ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ತಾರಕಕ್ಕೇರಿದ್ದು, ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಜಗದ್ಗುರು ಶ್ರೀಗಳ ವಿರುದ್ಧ ಕಲಾದಗಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ವಿವಾದವು ನ್ಯಾಯಾಲಯದಲ್ಲಿ ಇರುವಾಗಲೇ ಗಂಗಾಧರ ಸ್ವಾಮೀಜಿ ಮಠದ ದುರಸ್ತಿ ಕಾರ್ಯ ಮಾಡಿದ್ದು, ಮಠದ ಹೊಲ ಉಳುಮೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ರಂಭಾಪುರಿ ಶ್ರೀ ವಿರುದ್ಧ ಕಲಾದಗಿಯಲ್ಲಿ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರಂಭಾಪುರಿ ಶ್ರೀಯ ಕಾರಿನ ಮೇಲೆ ಮಹಿಳೆಯೊಬ್ಬರು ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ.
ರಂಭಾಪುರಿ ಶ್ರೀ ತೆರಳುವ ವಾಹನವನ್ನು ಅಡ್ಡಗಟ್ಟಲು ಪ್ರಯತ್ನ ಮಾಡಿದ್ದು, ಈ ವೇಳೆ ಸ್ಥಳದಲ್ಲಿ ತಳ್ಳಾಟ, ನೂಕಾಟ ಉಂಟಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ರಂಭಾಪುರಿ ಶ್ರೀ ವಿರುದ್ಧ ಧಿಕ್ಕಾರ ಕೂಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಮಠದ ವಿವಾದ ನ್ಯಾಯಾಲಯದಲ್ಲಿ ಇರುವಾಗಲೇ ಕಟ್ಟಡದ ದುರಸ್ತಿ ಹಾಗೂ ಜಮೀನು ಉಳುಮೆ ಮಾಡಿದ್ದಕ್ಕೆ ಭಕ್ತರಿಂದ ತಕರಾರು ತೆಗೆದಿದ್ದಾರೆ.
ಕಲಾದಗಿ ಪಂಚಗೃಹ ಗುರುಲಿಂಗೇಶ್ವರ ಮಠದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗೂ ಮುನ್ನ ಹೇಳಿಕೆ ನೀಡಿದ್ದ ರಂಭಾಪುರಿ ಶ್ರೀ, “ಕಲಾದಗಿಯಲ್ಲಿ ನಮ್ಮ ಕಾರ್ಯಕ್ರಮ ಇಲ್ಲ. ಅಲ್ಲಿ ನಾವು ಹೋಗೋದೂ ಇಲ್ಲ, ಅಭಿವೃದ್ಧಿ ಮಾಡಿದ್ರೆ ಒಳ್ಳೆಯದಲ್ಲವಾ? ಕೇಡು ಅಲ್ಲವಲ್ಲ, ನ್ಯಾಯಾಲಯ ಏನು ತೀರ್ಪು ಕೊಡುತ್ತೆ ಅದು ಇದ್ದೇ ಇರುತ್ತದೆ. ಅಭಿವೃದ್ಧಿ ಮಾಡುವುದನ್ನು ಕುಂಠಿತ ಮಾಡುವುದು ಸರಿಯಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಫೆ.24, 25ರಂದು ರಾಷ್ಟ್ರೀಯ ಐಕ್ಯತಾ ಸಮಾವೇಶ, ಲಾಂಛನ ಬಿಡುಗಡೆ ಮಾಡಿದ ಸಿದ್ದರಾಮಯ್ಯ
“ಧಾರ್ಮಿಕ ಸಂಸ್ಕೃತಿಯನ್ನು ಕೆಡಿಸುವ ಕೆಲವರು ಇದ್ದೇ ಇರ್ತಾರೆ. ಅದಕ್ಕೆ ಅವಕಾಶ ಕೊಡಬಾರದು. ಅದು ರಂಭಾಪುರಿ ಪೀಠದ ಶಾಖಾ ಮಠ ಆಗಿರುವುದರಿಂದ ಪೀಠದ ನಿರ್ಣಯವೇ ಅಂತಿಮ ಹೊರತು, ಬೇರೆಯವರ ಭಾವನೆಗಳಿಗೆ ಪುರಸ್ಕಾರ ಕೊಟ್ಟಿದ್ದೇ ಸಮಸ್ಯೆಗೆ ಕಾರಣ” ಎಂದು ಹೇಳಿದರು.