ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3 ಗಂಟೆ ಬಳಿಕ ಪ್ರವೇಶವಿಲ್ಲವೆಂದು ತಾಲೂಕು ಆಡಳಿತ ಫೆಬ್ರವರಿ 15 ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಧ್ಯಾಹ್ನ 3 ಗಂಟೆ ಬಳಿಕ ಪ್ರವೇಶವಿಲ್ಲವೆಂದು ಗುಂಡ್ಲುಪೇಟೆ ತಾಲೂಕು ತಹಶೀಲ್ದಾರ್ ಟಿ ರಮೇಶ್ ಬಾಬು ಅವರು ಫೆಬ್ರವರಿ 15ರಂದು ಆದೇಶ ಹೊರಡಿಸಿದ್ದರು. ಈ ಬಗ್ಗೆ ಭಾರೀ ಟೀಕೆ ಹಾಗೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಈ ಆದೇಶವನ್ನು ಹಿಂಪಡೆದಿದ್ದಾರೆ. ಈ ಮೂಲಕ ಹಿಂದಿನಂತೆ ಸಂಜೆ 4 ಗಂಟೆಯವರೆಗೆ ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆಯಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷಗಳಾದರೂ ಯಾವುದೇ ಭರವಸೆ ಈಡೇರಿಸಿಲ್ಲ: ಕಾಶಿನಾಥ ಬಂಡಿ
ವನ್ಯ ಜೀವಿಗಳಿಗೆ ತೊಂದರೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ 3 ಗಂಟೆ ಬಳಿಕ ಬಸ್ ನಿಷೇಧದ ಆದೇಶವನ್ನು ಹೊರಡಿಸಿದ್ದರು. ಆದರೆ ಭಕ್ತರು ಮತ್ತು ಪ್ರವಾಸಿಗರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಸಮೀಪದ ಕನ್ನೇಗಾಲ ಗ್ರಾಮಸ್ಥರು ಆದೇಶ ಹಿಂಪಡೆಯುವಂತೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದರು. ಈ ಕುರಿತು ಮೇಲಧಿಕಾರಿಗಳ ಜತೆ ಚರ್ಚಿಸಿದ ತಹಶೀಲ್ದಾರ್ 4 ಗಂಟೆವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟು ಮೊನ್ನೆ ಹೊರಡಿಸಿದ್ದ ಹೊಸ ಆದೇಶವನ್ನು ಹಿಂಪಡೆದಿದ್ದಾರೆ.