ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದನ್ನು ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಹಾಗೂ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ನಂತರ ಮಾತನಾಡಿದ ಪ್ರಗತಿಪರ ಹೋರಾಟಗಾರ ಯಲ್ಲಪ್ಪ ಹೆಗಡ, ಸರ್ಕಾರವು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನನ್ನಾಗಿ ಮಾಡಿದ್ದಕ್ಕಾಗಿ ಶರಣರ ಬಂಧುಗಳ ಪರವಾಗಿ ಹೃತ್ಪೂರ್ವಕವಾಗಿ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇವೆ ಎಂದರು.
12ನೇ ಶತಮಾನದಲ್ಲಿ ಅಸಮಾನತೆ ವಿರುದ್ಧ ಜಾತಿಯತೆಯ ವಿರುದ್ಧ, ಶೋಷಣೆಯ ವಿರುದ್ಧ ಧ್ವನಿ ಎತ್ತಿ ಕ್ರಾಂತಿ ಮಾಡಿದವರು ಬಸವಣ್ಣ. ಎಲ್ಲಾ ಕಾಯಕ ಜೀವಿಗಳನ್ನು ಒಗ್ಗೂಡಿಸಿ ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಹೋರಾಡಿದವರು. ಎಲ್ಲಾ ಸಮುದಾಯದ ಶರಣರನ್ನು ಒಗ್ಗೂಡಿಸಿ ಅನುಭವ ಮಂಟಪವನ್ನು ನಿರ್ಮಿಸಿದರು. ಇಂಥ ಪರಂಪರೆ ಇರುವ ನಮ್ಮ ನಾಡಲ್ಲಿ ಹಲವು ವಿಚಾರಗಳಿಂದ ಜನ ವಿಮುಖವಾಗುತ್ತಿರುವುದು ವಿಷಾದನೀಯ ಎಂದರು.
ಇದಕ್ಕೆ ವ್ಯವಸ್ಥಿತವಾಗಿ ಪಿತೋರಿ ಕೂಡ ನಡೆಯುತ್ತಿವೆ. ಇದರ ವಿರುದ್ಧ ಸಮಾನಮನಸ್ಕರು ಎಚ್ಚೆತ್ತುಕೊಂಡು ಸೌಹಾರ್ದತೆಯಿಂದ ಒಂದೇ ಮಕ್ಕಳ ತಾಯಿಯಾಗಿ ಈ ಹೋರಾಟವನ್ನು ಕೈಗೊಳ್ಳಬೇಕೆಂದರು. ಸಂಸ್ಕೃತಿಕ ನಾಯಕ ಅಂತ ಸರ್ಕಾರ ಘೋಷಣೆ ಮಾಡಿದರಷ್ಟೇ ಸಾಲದು ಅವರ ವಿಚಾರಗಳು ವಚನಗಳನ್ನು ಪ್ರತಿ ಮನೆ ಮನೆಗೆ ತಲುಪುವಂತ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗಣೇಶ್ ಮೇತ್ರಿ, ಭೀಮಾರ್ಮಿ ತಾಲೂಕ ಅಧ್ಯಕ್ಷ ಶೇಖರ್ ಕಾಂಬಳೆ, ಮೋಹಿನ್ ಅಂಜುಮನ್ ಸಂಸ್ಥೆಯ ಮುಖ್ಯಸ್ಥ ಆರಿಫ್, ಶ್ರೀಕಾಂತ್ ಪೂಜಾರಿ, ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಭೀಮಪ್ಪ ಹಳ್ಳಿ, ಅಂಥೋದೇಯಾ ಸಂಸ್ಥೆಯ ಮುಖ್ಯಸ್ಥ ಅಂತೋನಿ ಸಿ, ಹಸಿರು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ, ಸಂಜು ಕುರೆನ್ನವರ್, ಈರಪ್ಪ ಉಗ್ಗಿನವರ್ ಇತರರು ಇದ್ದರು.