- ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಕಬ್ಬಿನ ಗದ್ದೆಗೆ ಬೆಂಕಿ
- ಮೂರು ಎಕರೆದಷ್ಟು ಕಬ್ಬಿನ ಗದ್ದೆ ಬೆಂಕಿಗೆ ಆಹುತಿ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದಲ್ಲಿ ಭಾನುವಾರ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ, ಅಪಾರ ನಷ್ಟವಾಗಿದೆ.
ರೈತ ಈಶ್ವರಪ್ಪ ಬಡಿಗೇರ ಅವರ ಆರು ಎಕರೆ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಸ್ವತಃ ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವವರೆಗೆ ಮೂರು ಎಕರೆದಷ್ಟು ಕಬ್ಬಿನ ಗದ್ದೆ ಬೆಂಕಿಗೆ ಆಹುತಿಯಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹೊಲದ ಬದುವಿಗೆ ಇರುವ ಟಿಸಿಯಿಂದ ಹೊಲದ ಮಧ್ಯ ಭಾಗದಲ್ಲೇ ತಂತಿಗಳು ಹಾದು ಹೋಗಿವೆ. ಕಬ್ಬಿನ ಪಡದ ಪ್ರತಿ ದಂಟು ಸುಮಾರು 40 ಗಣಿಕೆಯಷ್ಟು ಎತ್ತರಕ್ಕೆ ಬೆಳೆದಿದ್ದು, ವಿದ್ಯುತ್ ತಂತಿಗಳು ಜೋತು ಬಿದ್ದ ಪರಿಣಾಮ ಬೆಂಕಿ ಅವಘಡ ಸಂಭವಿಸಿದೆ.
“ಸುತ್ತ ಮುತ್ತಲಿನ ಊರಿನಲ್ಲೇ ಈ ಪರಿ ಪ್ರಮಾಣದಲ್ಲಿ ಕಬ್ಬು ಬೆಳೆದಿಲ್ಲ. ದಾರಿ ಹೋಕರೆಲ್ಲ ಕಬ್ಬು ಬೆಳೆದಿದ್ದನ್ನು ನೋಡಿ ಬೆಳೆದರೆ ಹೀಗೆ ಬೇಳಿಬೇಕು ಎನ್ನುವ ಪ್ರಶಂಸೆಯ ಮಾತುಗಳನ್ನು ಹೇಳುತ್ತಿದ್ದರು. ಈಗ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಎಕರೆ ಒಂದಕ್ಕೆ ಕಬ್ಬಿಗೆ ₹3 ಲಕ್ಷ ನಷ್ಟ ಆಗುತ್ತದೆ. ಮೂರು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಸೋಮವಾರ ತಹಶೀಲ್ದಾರ್ ಸಾಹೇಬರು ಹೊಲ ಬಂದು ನೋಡುತ್ತೇನೆ ಎಂದಿದ್ದಾರೆ” ಎನ್ನುತ್ತಾರೆ ರೈತನ ಮಗ ಈರಣ್ಣ ಬಡಿಗೇರ.
“ಇದೇ ಮೊದಲ ಬಾರಿಗೆ ನಾವು ಕಬ್ಬು ಬೆಳೆದಿದ್ದು. ವಾರದ ಹಿಂದೆ ಎಲ್ಲ ಸಂಬಂಧಿಕರು ಸೇರಿ ಸಂಭ್ರಮದಿಂದ ಕಬ್ಬಿನ ಪಡಕ್ಕೆ ಪೂಜೆ ಮಾಡಿದ್ದೆವು. ಸುತ್ತಲಿನ ರೈತರು ಕಬ್ಬು ಬೆಳೆದ ಪರಿ ನೋಡಿ ಬಹಳ ಹರ್ಷ ವ್ಯಕ್ತಪಡಿಸಿದ್ದರು. ಮುಂದಿನ ತಿಂಗಳು ಕಟಾವು ಮಾಡಬೇಕಿತ್ತು. ಇಷ್ಟರಲ್ಲಿ ಬೆಂಕಿ ಬಿದ್ದು ಕಬ್ಬಿನ ಪಡ ಸುಟ್ಟು ಹೋಗಿದೆ. ಗಂಗಾ ಕಲ್ಯಾಣ ಕೊಳವೆಬಾಯಿಯಲ್ಲಿ ನೀರು ಬರದೇ ಇದ್ದಿದ್ದರಿಂದ 3 ಲಕ್ಷ ರೂ. ಸಾಲ ಮಾಡಿ ಮತ್ತೆ ಎರಡು ಕೊಳವೆಬಾವಿ ಕೊರಿಸಿದ್ದೆ. 2 ಲಕ್ಷ ರೂ. ಸಾಲ ಮಾಡಿ ಆರು ಎಕರೆ ಕಬ್ಬು ಹಾಕಿದ್ದೆ. ಈಗ ಮೂರು ಎಕರೆ ಪಡ ಪೂರ್ತಿ ಸುಟ್ಟು ಹೋಗಿದೆ. ಸರ್ಕಾರ ನಮ್ಮ ಪಾಲಿಗೆ ನೆರವಾಗಬೇಕು. ಹೊಲದ ನಷ್ಟ ನೋಡಿ ಪರಿಹಾರ ಕಲ್ಪಿಸಿದರೆ ಸಾಲದ ಹೊರೆ ಕಡಿಮೆ ಆಗುತ್ತದೆ” ಎಂದು ಕಬ್ಬು ಬೆಳೆದ ರೈತ ಈಶ್ವರಪ್ಪ ಬಡಿಗೇರ ಕಣ್ಣೀರಿಟ್ಟು ಹೇಳಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.