ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಲು ಇಲಾಖೆಗಳ ಅಧಿಕಾರಿಗಳು ಹಾಗೂ ಬಾಗಲಕೋಟೆ ಜಿಲ್ಲೆ, ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರ ನಡುವೆ ಉತ್ತಮ ಸಮನ್ವಯ ಇರಬೇಕು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಅನಿಲಕುಮಾರ ದಡ್ಡಿ ಹೇಳಿದರು.
ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಸರ್ಕಾರದಿಂದ ಹೊರಡಿಸಲಾದ ಎಲ್ಲ ನಿರ್ದೇಶನಗಳನ್ನು ಜಿಲ್ಲೆ ಹಾಗೂ ತಾಲೂಕು ಸಮಿತಿಯ ಸದಸ್ಯರು ಕಡ್ಡಾಯವಾಗಿ ಪಾಲಿಸಬೇಕು” ಎಂದು ಸೂಚಿಸಿದರು.
“ಇತ್ತೀಚೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಜಿಲ್ಲಾ ಸಮಿತಿ ಅಧ್ಯಕ್ಷರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ. ಪ್ರಭಾಕರ ಮಾಹಿತಿ ನೀಡಿ, “ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 4,06,491 ಮಹಿಳೆಯರು ಸೌಲಭ್ಯ ಪಡೆಯುತ್ತಿದ್ದು, ಮೇ ತಿಂಗಳವರೆಗೆ ಹಣ ಜಮೆಯಾಗಿದೆ. ಯೋಜನೆಯ ಫಲಾನುಭವಿಗಳಲ್ಲಿ 9,399 ಮಂದಿ ಮೃತಪಟ್ಟಿದ್ದು, ಅವರಲ್ಲಿ 3,611 ಮಂದಿಯ ಖಾತೆಗಳಿಗೆ ಇನ್ನೂ ಹಣ ಜಮೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಪೈಕಿ ಈಗಾಗಲೇ ಸುಮಾರು ₹27 ಲಕ್ಷವನ್ನು ಸರ್ಕಾರಕ್ಕೆ ಮರಳಿಸಲಾಗಿದೆ” ಎಂದು ತಿಳಿಸಿದರು.
“ಗೃಹಜ್ಯೋತಿ ಯೋಜನೆಯಡಿ 4,35,672 ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, 1,87,047 ಕುಟುಂಬಗಳ ಮಾಹಿತಿ ನವೀಕರಣ ಪೂರ್ಣಗೊಂಡಿದೆ. ಉಳಿದ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಹೆಸ್ಕಾಂ ಹುಬ್ಬಳ್ಳಿ ವಲಯದಲ್ಲಿ ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ” ಎಂದು ಹೇಳಿದರು.
ಶಕ್ತಿ ಯೋಜನೆ ಕುರಿತು ಚರ್ಚೆ ವೇಳೆ, “ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಯಾವುದೇ ಅಡಚಣೆಯಿಲ್ಲದೆ ದೊರೆಯಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವ ಅಗತ್ಯವಿದೆ” ಎಂದು ಅಧ್ಯಕ್ಷ ಅನಿಲಕುಮಾರ ದಡ್ಡಿ ಸೂಚಿಸಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2,024 ಫಲಾನುಭವಿಗಳು ಎರಡು ವರ್ಷಗಳವರೆಗೆ ಆರ್ಥಿಕ ನೆರವು ಪಡೆದುಕೊಂಡಿರುವುದಾಗಿ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಗದಗ | ಸ್ಲಂ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪ್ರತಿಭಟನೆ
ಅನ್ನಭಾಗ್ಯ ಯೋಜನೆಯಡಿ ಅಕ್ಕಿಯೊಂದಿಗೆ ಜೋಳ ವಿತರಣೆ ಮಾಡಲಾಗುತ್ತಿದ್ದು, ಪಡಿತರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ಇದುವರೆಗೆ 18 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶಂಕರಪ್ಪ ನೇಗಲಿ, ಸದಸ್ಯರಾದ ಜಯಶ್ರೀ ತಿಮ್ಮಾಪೂರ, ಶಿವಪ್ಪ ಕೋನೇರಿ, ರವೀಂದ್ರ ಯಡಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.





