ದೆಹಲಿಯ ಜಂತರ್-ಮಂತರ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಹಾರಗಳನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಅನ್ನು ಖಂಡಿಸಿ, ರಾಯಚೂರು ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು “ಬಿಜೆಪಿ ಹಟಾವೋ, ದೇಶ್ ಬಚಾವೋ”, “ನೀಟ್ ಹಗರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಕೇಂದ್ರ ಸರ್ಕಾರ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಎಸ್‌ಐಆರ್ ಮೂಲಕ ಮತದಾನದ ಹಕ್ಕು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಮೂಲಕ ಶಿಕ್ಷಣದ ಹಕ್ಕಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನವಾದ ಶಿಕ್ಷಣದ ಹಕ್ಕು ನೀಡಿದ್ದಾರೆ. ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗೆ ಯುವಜನತೆ ಧ್ವನಿಯಾಗಬೇಕು. ಸಂವಿಧಾನ ಮೌಲ್ಯಗಳ ಉಳಿವಿಗಾಗಿ ಮತ್ತೊಮ್ಮೆ ದೇಶವ್ಯಾಪಿ ಹೋರಾಟದ ಅಗತ್ಯವಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಹಿರಿಯ ಮುಖಂಡ ಕೆ. ಶಾಂತಪ್ಪ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಿದೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ಬದಲು ಪ್ರತಿಭಟನೆ ನಡೆಸಿದವರ ಮೇಲೆ ಲಾಠಿಚಾರ್ಜ್ ನಡೆಸಿರುವುದು ಖಂಡನೀಯ. ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ಬದಲು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ಮಶಾನಕ್ಕೆ ತೆರಳಲು ದಾರಿಯೇ ಇಲ್ಲ; ನೀರಿನಲ್ಲೇ ಶವ ಹೊತ್ತು ಸಾಗುವ ಗ್ರಾಮಸ್ಥರ ಗೋಳು
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಅಬ್ದುಲ್ ಖರೀಮ್, ಎಂ.ಆರ್. ಭೇರಿ, ಮಲ್ಲೇಶ ಕೊಲಿಮಿ, ವಿಶ್ವನಾಥ ಪಟ್ಟಿ, ಯೂಸೂಫ್ ಖಾನ್, ಡಾ. ದಾದಪೀರ, ಅರುಣ ದೋತರಬಂಡಿ, ಮರಿಸ್ವಾಮಿ ಗಟ್ಟು ಬಿಚ್ಚಾಲಿ, ಫೈಸಲ್ ಖಾನ್, ಮಹ್ಮದ್ ಲೈಬಾದ್, ಕೆ. ರಾಘವೇಂದ್ರ, ಎಂ.ಡಿ. ಜಾವಿದ್, ಪ್ರತಾಪ್ ರೆಡ್ಡಿ, ಪ್ರವೀಣ್ ಕುಮಾರ ಗುಡಿಸಿ, ಅಬೀಬ್ ಖಾಜಿ, ಮಧುಕುಮಾರ, ರಾಬರ್ಟ್, ಸೀನು ಅಸ್ಕಿಹಾಳ, ಹುಸೇನ್ ಪಾಷಾ, ಇಸ್ಮಾಯಿಲ್ ಮಾಡಗಿರಿ, ಕಿಶೋರ್, ವೀರ ಗಂಗಾಧರ, ಸಂತೋಷ ಸೊಪ್ಪಿಮಠ, ಲಿಂಗಣ್ಣ ಹವಲ್ದಾರ ನಾಯಕ್, ಶಾಮೀದ್, ಪ್ರವೀಣ್ ಕುಮಾರ, ಸಂತೋಷ ಕುಮಾರ, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಗೌಸ್, ಪ್ರಿತಮ್ ಕೊಡ್ಲಿ, ರಫಿ ಸಿರವಾರ, ಕುಮಾರ ರಾಠೋಡ್, ಮೌನೇಶ್ ಪೂಜಾರಿ, ಅಬ್ದುಲ್ ಖದೀರ್, ಹನುಮಂತ ಕರಣಿ, ರಾಜುಗೌಡ ಅರಕೇರಾ, ಆಸೀಫ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.





