ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮರ್ಪಕವಾಗಿ ವಿತರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ ವಾಡಿಕೆಯಂತೆ 93.8 ಎಂಎಂ ಮಳೆ ಆಗಬೇಕಿತ್ತು. ಆದರೆ ಈ ಬಾರಿ 101 ಎಂ.ಎಂ ಮಳೆಯಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
“ಬಾದಾಮಿ, ಮುಧೋಳ, ರಬಕವಿ ಬನಹಟ್ಟಿ ತಾಲೂಕಿನಲ್ಲಿ ಹೆಚ್ಚಿಗೆ ಮಳೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 85 ಸಾವಿರ ಹೆಕ್ಟೇರ್‌ನಷ್ಟು ಕಬ್ಬು ಹಾಗೂ ಇತರೆ ಬೆಳೆಗಳ ಬಿತ್ತನೆ ಆಗಿರುತ್ತದೆ. ಬಿತ್ತನೆ ಮಾಡದ ರೈತರು ಸಮರ್ಕವಾಗಿ ಮಳೆ ಆಗುವವರೆಗೆ ಬಿತ್ತನೆ ಕಾರ್ಯ ಮಾಡಬಾರದು. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇರುವುದಿಲ್ಲ. ಅಗತ್ಯ ದಾಸ್ತಾನು ಲಭ್ಯವಿದೆ” ಎಂದರು.
“ವಿವಿಧ ಬಿತ್ತನೆ ಬೀಜ ಸೇರಿ 7,128 ಕ್ವಿಂಟಲ್ ಬೇಡಿಕೆ ಇದ್ದು, ಈ ಪೈಕಿ 3,580 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ. 1,319 ಕ್ವಿಂಟಲ್‌ನಷ್ಟು ವಿತರಣೆ ಮಾಡಲಾಗಿದೆ. 2,261 ಕ್ವಿಂಟಲ್‌ನಷ್ಟು ಬಾಕಿ ಇದೆ. ವಿವಿಧ ರಸಗೊಬ್ಬರ ಸೇರಿ 55,711 ಮೆ.ಟನ್ ಬೇಡಿಕೆ ಪೈಕಿ 26,463 ಮೆ.ಟನ್ ಹಂಚಿಕೆಯಾಗಿದೆ. ರೈತ ಸೇವಾ ಕೇಂದ್ರಗಳಲ್ಲಿ ರೈತರಿಗೆ ವ್ಯವಸ್ಥಿತ ವಿತರಣೆಗೆ ಕ್ರಮಕೈಗೊಳ್ಳಬೇಕು” ಎಂದು ಸೂಚಿಸಿದರು.
ಇದನ್ನೂ ಓದಿದ್ದೀರಾ? ರಾಯಚೂರು | ರಸಗೊಬ್ಬರ ದಾಸ್ತಾನು ಹಾಹಾಕಾರ….
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್ ಎಂ ಕೋರೆ, ಜಮಖಂಡಿ ವಿಭಾಗದ ಕೃಷಿ ಉಪನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿ ಸುಪ್ರಿಯಾ, ತೋಟಗಾರಿಕೆ ವಿವಿ ಸಹ ಸಂಶೋಧನಾ ನಿರ್ದೇಶಕ ವಸಂತ ಗಾಣಿಗೇರ ಇದ್ದರು.





