ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿದ್ದು, ವಿಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಮಂದಿ ಸಂಸದರು ಬಂಡಾಯವೆದ್ದು ಎನ್‌ಡಿಎ ಸೇರಲು ಮುಂದಾಗಿದ್ದಾರೆ. ಈ ಕುರಿತು ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಈ 20 ಮಂದಿ ಯಾರು ಎಂಬ ಕುತೂಹಲ ಎಲ್ಲೆಡೆ ಮನೆಮಾಡಿದೆ.
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಬಂಡಾಯ ಸಂಸದರ ಈ ಗುಂಪನ್ನು ಕಾಕೋಲಿ ಘೋಷ್ ದಸ್ತಿದಾರ್ ಅವರು ಮುನ್ನಡೆಸುತ್ತಿದ್ದಾರೆ. ಈ 20 ಮಂದಿ ಸಂಸದರು ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಲು ನಿರ್ಧರಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಬಂಡಾಯ ನಾಯಕರು ಸ್ಪೀಕರ್‌ಗೆ ಸಾಮೂಹಿಕವಾಗಿ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಬಂಡಾಯ ಶಿಬಿರದಲ್ಲಿ ಗುರುತಿಸಿಕೊಂಡಿರುವ ಪ್ರಮುಖ 13 ಸಂಸದರ ಹೆಸರುಗಳು ಈಗಾಗಲೇ ಬಹಿರಂಗವಾಗಿವೆ. ಅವರಲ್ಲಿ ಕಾಕೋಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಶರ್ಮಿಳಾ ಸರ್ಕಾರ್, ಅರೂಪ್ ಚಕ್ರವರ್ತಿ, ಕಾಳಿಪದ ಸೊರೆನ್, ಜಗದೀಶ್ ಚಂದ್ರ ಬಸುನಿಯಾ, ಪಾರ್ಥ ಭೌಮಿಕ್, ಬಾಪಿ ಹಲ್ದರ್, ಶತಾಬ್ದಿ ರಾಯ್, ಅಸಿತ್ ಕುಮಾರ್ ಮಾಲ್, ಜೂನ್ ಮಾಲಿಯಾ, ಅಬು ತಾಹೇರ್ ಖಾನ್ ಮತ್ತು ಖಲೀಲುರ್ ರೆಹಮಾನ್ ಸೇರಿದ್ದಾರೆ. ಇವರೆಲ್ಲರೂ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಈ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ರಾಜ್ಯಸಭೆ ಸ್ಥಾನಕ್ಕೆ ಟಿಎಂಸಿಯ ಸುಖೇಂದು ಶೇಖರ್ ರಾಜೀನಾಮೆ
ಈ 13 ನಾಯಕರ ಹೊರತಾಗಿ, ಇತರ 4 ಸಂಸದರೊಂದಿಗೂ ಎನ್‌ಡಿಎ ನಾಯಕರು ನಿರಂತರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸೆಲೆಬ್ರಿಟಿ ಹಾಗೂ ಸ್ಟಾರ್ ಪ್ರಚಾರಕರಾಗಿರುವ ರಚನಾ ಬ್ಯಾನರ್ಜಿ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಖ್ಯಾತ ನಟ ದೇವ್ ಅಧಿಕಾರಿ ಮತ್ತು ಹಿರಿಯ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಹೆಸರುಗಳು ಕೂಡ ಇವೆ ಎನ್ನಲಾಗುತ್ತಿದೆ. ಆದರೆ ಇವರುಗಳ ಹೆಸರುಗಳ ಬಗ್ಗೆ ಖಚಿತ ಮಾಹಿತಿಯಿಲ್ಲ. ಈ ನಾಲ್ವರನ್ನು ಸೇರಿಸಿದರೆ 20 ಸಂಸದರ ಪೈಕಿ ಒಟ್ಟು 17 ಮಂದಿಯ ಹೆಸರುಗಳು ಮುಂಚೂಣಿಯಲ್ಲಿವೆ.
ಒಂದೆಡೆ ಈ 18 ಮಂದಿ ಸಂಸದರ ಹೆಸರುಗಳು ಬಲವಾಗಿ ಕೇಳಿಬರುತ್ತಿದ್ದರೂ, ಟಿಎಂಸಿಯ ಕೆಲವು ಕಟ್ಟಾ ಬೆಂಬಲಿಗರು ಮತ್ತು ಪ್ರಮುಖ ನಾಯಕರ ಹೆಸರುಗಳು ಈ ಪಟ್ಟಿಯಲ್ಲಿ ಕಂಡುಬಂದಿಲ್ಲ. ವಿಶೇಷವಾಗಿ ಸಾಯೋನಿ ಘೋಷ್, ಕಲ್ಯಾಣ್ ಬ್ಯಾನರ್ಜಿ ಮತ್ತು ಬಹು ಚರ್ಚಿತ ನಾಯಕಿ ಮಹುವಾ ಮೊಯಿತ್ರಾ ಅವರ ಹೆಸರುಗಳು ಈ ಬಂಡಾಯ ಶಿಬಿರದಲ್ಲಿ ಎಲ್ಲೂ ಕೇಳಿ ಬರುತ್ತಿಲ್ಲ. ಈ ನಾಯಕರು ಮಮತಾ ಬ್ಯಾನರ್ಜಿ ಅವರ ಜೊತೆಯಲ್ಲೇ ದೃಢವಾಗಿ ನಿಂತಿದ್ದಾರೆ ಹಾಗೂ ಬಂಡಾಯದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.





