ಭೀತಿಯ ವಾತಾವರಣ ಪರದೆಯನ್ನು ಹರಿದದ್ದೇ ಕಾಕ್ರೋಚ್ ಪಾರ್ಟಿಯ ಗಣನೀಯ ಸಾಧನೆ. ಪ್ರತಿಭಟನೆ ಸಾಧ್ಯವೆಂದು ತೋರಿದ್ದೇ ಒಂದು ಗೆಲುವು. ಕಾಕ್ರೋಚ್ ಜನತಾ ಪಾರ್ಟಿಯ ಆನ್ಲೈನ್ ಆಂದೋಲನ ಕ್ಷೇತ್ರಮಟ್ಟಕ್ಕೆ ಎಷ್ಟರಮಟ್ಟಿಗೆ ಇಳಿದೀತು ಎಂಬ ಕುರಿತ ಕುತೂಹಲ ಮತ್ತು ಆತಂಕವಿತ್ತು. ಎರಡು ಕೋಟಿ ಆನ್ಲೈನ್ ಅನುಯಾಯಿಗಳಿದ್ದರೂ, ಮೊನ್ನೆಯ ಪ್ರತಿಭಟನೆ ಹಲವು ಸಾವಿರಕ್ಕೆ ಸೀಮಿತವಾಯಿತಲ್ಲ ಎಂದು ನಿರಾಶೆಗೊಂಡವರುಂಟು. ಇಷ್ಟಾದರೂ ಆಯಿತಲ್ಲ ಎಂದು ಸಕಾರಾತ್ಮಕ ಹೊಳಹುಗಳನ್ನು ಕಂಡವರೂ ಉಂಟು.
ಮೊನ್ನೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಶಾಂತಿಯುತ ಪ್ರತಿಭಟನೆ ದೇಶದ ಯುವಜನತೆಯಲ್ಲಿ ಹೆಪ್ಪುಗಟ್ಟುತ್ತಿರುವ ಒಳಗುದಿಯ ಪ್ರತೀಕ. ಶಿಕ್ಷಣ, ಉದ್ಯೋಗಾವಕಾಶಗಳು, ಆರ್ಥಿಕ ಅವಕಾಶಗಳ ಕುರಿತ ವರ್ಷಗಳಿಂದ ಹತ್ತಿಕ್ಕಿರುವ ನಿರಾಶೆಯ ದೈತ್ಯ ನೀರ್ಗಲ್ಲಿನ ತುತ್ತ ತುದಿ ಮಾತ್ರ. ಜಲರಾಶಿಯಲ್ಲಿ ಅವಿತಿರುವ ಚದರ ಮೈಲಿಗಳುದ್ದದ ದೈತ್ಯಗಾತ್ರದ ಮಂಜಿನ ಹೆಬ್ಬಂಡೆಯಿದು. ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ಕಂಡದ್ದು ಇದರ ಶಿಖರವಷ್ಟೇ.
ಇದೇ ಹೊತ್ತಿನಲ್ಲಿ ರಾಹುಲ್ ಗಾಂಧೀ ನೇತೃತ್ವದ ಯುವ ಕಾಂಗ್ರೆಸ್ಸಿಗರ ಭಾರೀ ಪ್ರತಿಭಟನೆಗಳನ್ನು ನೆನೆಯಲೇಬೇಕಿದೆ. ಪೊಲೀಸರ ಲಾಠಿಯೇಟುಗಳು, ಜಲಫಿರಂಗಿಗಳ ಕ್ರೌರ್ಯವನ್ನು ಲೆಕ್ಕಿಸದೆ ನಡೆಯುತ್ತಿರುವ ಈ ಪ್ರತಿಭಟನೆಗಳಿಗೆ ಗೋದಿ-ಮೋದಿ ಮೀಡಿಯಾಗಳಲ್ಲಿ ಜಾಗ ಇಲ್ಲವಾಗಿದೆ.
ನೀಟ್ ಮತ್ತು ಸಿಬಿಎಸ್ಇ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಉತ್ತರಪತ್ರಿಕೆಗಳ ಮೌಲ್ಯಮಾಪನ ಹಗರಣಗಳು ಯುವಜನರನ್ನು ನಿರಾಶೆಯ ಕೂಪಕ್ಕೆ ತಳ್ಳಿವೆ. ಕನಿಷ್ಠ ಐವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಗದಷ್ಟು ನಿರಾಸೆ ಮತ್ತು ಖಿನ್ನತೆಗೆ ಜಾರಿರುವ ಮಕ್ಕಳೆಷ್ಟೆಂದು ಲೆಕ್ಕ ಇಟ್ಟವರಾರು? ಒಮ್ಮೆ ಬರೆಯುವ ಹೊತ್ತಿಗೇ ಮಕ್ಕಳ ಚೈತನ್ಯವನ್ನು ಬತ್ತಿಸಿಬಿಡುವಷ್ಟು ಕಠಿಣ ಪರೀಕ್ಷೆ. ತಮ್ಮದಲ್ಲದ ತಪ್ಪಿಗಾಗಿ ಮತ್ತೆ ಮತ್ತೆ ಅವರನ್ನು ಅಗ್ನಿಪರೀಕ್ಷೆಗಳಿಗೆ ಗುರಿ ಮಾಡುವುದು ಘೋರ ವೈಫಲ್ಯ. ದೇಶದ ನಂಜುಮಯ ಪರೀಕ್ಷಾ ಉದ್ಯಮವು ಯುವಜನರ ನಿರೀಕ್ಷೆಗಳನ್ನು ಮಣ್ಣುಗೂಡಿಸುತ್ತಿರುವ ಕೃತ್ಯ. ಯುವಜನ ಯಾಕೆ ಏನು ಎಂದು ಕೇಳುವ ಸ್ಥಿತಿಯನ್ನು ದಾಟಿದ್ದಾರೆ. ಮಾಡು ಇಲ್ಲವೇ ಮಡಿ ಎಂಬ ಹಂತಕ್ಕೆ ಹೆಜ್ಜೆ ಇಟ್ಟಿದ್ದಾರೆ ಎಂಬ ಸಾಮಾಜಿಕ ರಾಜಕೀಯ ವಿಶ್ಲೇಷಕ ಪ್ರತಾಪ್ ಭಾನು ಮೆಹ್ತಾ ಅವರ ಮಾತುಗಳಲ್ಲಿ ಕಟುಸತ್ಯವಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ವೈಫಲ್ಯದ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂಬುದು ಕಾಕ್ರೋಚ್ ಪಾರ್ಟಿಯ ಆಗ್ರಹ. ಪದವಿಯಿಂದ ಪ್ರಧಾನ್ ಕೆಳಗೆ ಇಳಿಯುವ ತನಕ ತನ್ನ ಪ್ರತಿಭಟನೆ ಹಂತ ಹಂತಗಳಲ್ಲಿ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ.
ಮೊನ್ನೆಯ ಪ್ರತಿಭಟನೆಗೆಂದು ನಾನಾ ರಾಜ್ಯಗಳಿಂದ ದೆಹಲಿಗೆ ಬಂದಿಳಿದ ‘ಕಾಕ್ರೋಚ್’ಗಳ ಕೈಗಳಲ್ಲಿ ಹೂವುಗಳಿದ್ದವು, ಸಂವಿಧಾನದ ಪ್ರತಿ ಇತ್ತು. ಮನಸುಗಳಲ್ಲಿ ವ್ಯವಸ್ಥೆಯನ್ನು ಬದಲಾಯಿಸುವ ಹುಮ್ಮಸ್ಸಿತ್ತು. ಪೊಲೀಸರೊಂದಿಗೆ ಘರ್ಷಣೆಗೆ ಇಳಿಯದಂತೆ ಶಾಂತಿಯನ್ನು ಕಾಪಾಡಬೇಕೆಂಬ ಸೂಚನೆಗಳನ್ನು ಪಾಲಿಸಿದ್ದರು.
ಸರ್ಕಾರದ ಪಾಲಿಗೆ ತಾವುಗಳು ಕೇವಲ ಕೀಟಗಳೇ ಇರಬಹುದು, ಆದರೆ ನಾವು ಜೀವಂತವಿದ್ದೇವೆ ಮತ್ತು ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಸಾಮರ್ಥ್ಯ ನಮಗಿದೆ ಎಂಬುದು ‘ಕಾಕ್ರೋಚ್’ಗಳ ಆತ್ಮವಿಶ್ವಾಸವಾಗಿತ್ತು.
ಮೋದಿ ಸರ್ಕಾರ ತನ್ನ ವಿರುದ್ಧದ ಯಾವುದೇ ಪ್ರತಿಭಟನೆಗಳನ್ನು ಸಹಿಸಿರುವ ದಾಖಲೆಗಳಿಲ್ಲ. ರೈತರ ಪ್ರತಿಭಟನೆಗೆ ದೇಶದ್ರೋಹದ ಹೆಸರಿಟ್ಟು ಬಗ್ಗುಬಡಿಯಲು ಹವಣಿಸಿತು. ಪೌರತ್ವ ಕಾಯಿದೆಯ ತಿದ್ದುಪಡಿ ವಿರೋಧವನ್ನು ಅಮಾನುಷವಾಗಿ ಹತ್ತಿಕ್ಕಿತು. ತನ್ನನ್ನು ಟೀಕಿಸುವವರನ್ನು ಯಎಪಿಎ, ರಾಷ್ಟ್ರೀಯ ಭದ್ರತೆ, ದೇಶದ್ರೋಹ ಮುಂತಾದ ಕರಾಳ ಶಾಸನಗಳ ಅಡಿಯಲ್ಲಿ ತುಳಿಯುತ್ತಿದೆ. ಜೈಲುಗಳಿಗೆ ತಳ್ಳುತ್ತಲಿದೆ. ಉಕ್ಕಿನ ಹಸ್ತದಿಂದ ಹೊಸಕಿ ಹಾಕುತ್ತಲಿದೆ. ಭಯವನ್ನು ಬಿತ್ತಿ ಬೀರಲಾಗಿದೆ.
ಇಂತಹ ಭೀತಿಯ ವಾತಾವರಣ ಪರದೆಯನ್ನು ಹರಿದದ್ದೇ ಕಾಕ್ರೋಚ್ ಪಾರ್ಟಿಯ ಗಣನೀಯ ಸಾಧನೆ. ಪ್ರತಿಭಟನೆ ಸಾಧ್ಯವೆಂದು ತೋರಿದ್ದೇ ಒಂದು ಗೆಲುವು. ಕಾಕ್ರೋಚ್ ಜನತಾಪಾರ್ಟಿಯ ಆನ್ಲೈನ್ ಆಂದೋಲನ ಕ್ಷೇತ್ರಮಟ್ಟಕ್ಕೆ ಎಷ್ಟರಮಟ್ಟಿಗೆ ಇಳಿದೀತು ಎಂಬ ಕುರಿತ ಕುತೂಹಲ ಮತ್ತು ಆತಂಕವಿತ್ತು. ಎರಡು ಕೋಟಿ ಆನ್ಲೈನ್ ಅನುಯಾಯಿಗಳಿದ್ದರೂ, ಮೊನ್ನೆಯ ಪ್ರತಿಭಟನೆ ಹಲವು ಸಾವಿರಕ್ಕೆ ಸೀಮಿತವಾಯಿತಲ್ಲ ಎಂದು ನಿರಾಶೆಗೊಂಡವರುಂಟು. ಇಷ್ಟಾದರೂ ಆಯಿತಲ್ಲ ಎಂದು ಸಕಾರಾತ್ಮಕ ಹೊಳಹುಗಳನ್ನು ಕಂಡವರೂ ಉಂಟು.
ಯುವಜನ ತೋರಿರುವ ಈ ನಿರ್ಭೀತಿ ಮುಂಬರುವ ಪ್ರತಿಭಟನೆಗಳಿಗೆ ಇನ್ನಷ್ಟು ಸಂಖ್ಯೆಯನ್ನು ಸೆಳೆದರೆ ಆಶ್ಚರ್ಯವಿಲ್ಲ.
ಕಾಕ್ರೋಚ್ ಜನತಾ ಪಾರ್ಟಿ ಕೇವಲ ಮೂರು ವಾರಗಳಷ್ಟು ಹಳೆಯ ‘ಪಕ್ಷ’. ಈ ಪಕ್ಷದ ಬೆಂಬಲಿಗರು ಬಹಳ ಹೆಮ್ಮೆಯಿಂದ ತಮ್ಮನ್ನು ‘ಕಾಕ್ರೋಚ್’ (ಜಿರಳೆ) ಎಂದು ಕರೆದುಕೊಳ್ಳುತ್ತಾರೆ. ದೇಶದ ಆಡಳಿತ ವ್ಯವಸ್ಥೆಯ ಕುಸಿತ, ನಿರುದ್ಯೋಗ, ಅದಕ್ಷತೆ, ಅಸಾಮರ್ಥ್ಯ ಕುರಿತು ಯುವಜನಾಂಗ ಅದುಮಿಟ್ಟುಕೊಂಡಿದ್ದ ಹತಾಶೆಯ ಒಂದು ಭಾಗವಷ್ಟೇ ಕಾಕ್ರೋಚ್ ಜನತಾ ಪಾರ್ಟಿಯ ರೂಪದಲ್ಲಿ ಹೊರಬಿದ್ದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮೊಕದ್ದಮೆಯೊಂದರ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸುವ ನಿರುದ್ಯೋಗಿ ಯುವಜನರನ್ನು ಕಾಕ್ರೋಚ್ಗಳು ಪರೋಪಜೀವಿಗಳು ಎಂದು ಜರೆದಿದ್ದರು. ತಾವು ಬಳಸಿದ್ದ ಪದವೊಂದು ಆನ್ಲೈನ್ನಲ್ಲಿ ಬೃಹದಾಕಾರದ ಆಂದೋಲನವೊಂದಕ್ಕೆ ದಾರಿ ಮಾಡೀತೆಂದು ಅವರು ಕನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ.
ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ಈ ಅವಹೇಳನದ ಬೈಗುಳದಿಂದ ತೀವ್ರ ಮಾನಸಿಕ ಕ್ಲೇಶಕ್ಕೆ ತುತ್ತಾಗುವುದರ ಜೊತೆಗೆ ವ್ಯಂಗ್ಯಾತ್ಮಕ ಮೀಮ್ ಅಕೌಂಟ್ ತೆರೆಯಲು ಪ್ರೇರಣೆಯನ್ನೂ ಪಡೆದರು. ವಿಡಂಬನಾತ್ಮಕ ‘ರಾಜಕೀಯ ಪಕ್ಷ’ವೊಂದು ಹುಟ್ಟಿತು. ಬೆರಳೆಣಿಕೆಯ ದಿನಗಳೊಳಗೇ ಕಾಕ್ರೋಚ್ ಜನತಾ ಪಾರ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿತು. ಇನಸ್ಟಾಗ್ರಾಮ್ ಒಂದರಲ್ಲೇ ಎರಡೂ ಕಾಲು ಕೋಟಿಯಷ್ಟು ಮಂದಿ ಹೊಸ ‘ಪಕ್ಷ’ದ ಹಿಂಬಾಲಕರಾದರು. ದೇಶದ ಯುವಜನ ಆಂದೋಲನಗಳ ಇತಿಹಾಸದಲ್ಲೇ ಇದೊಂದು ವಿರಳ ವಿದ್ಯಮಾನ.
ಈ ಲೇಖನ ಓದಿದ್ದೀರಾ?: ರಸಗೊಬ್ಬರ ಕೊರತೆ ಮತ್ತು ಮೋದಿ ಬೋಧನೆ
ನಿರುದ್ಯೋಗ, ಭ್ರಷ್ಟಾಚಾರ, ರಾಜಕೀಯ ನಿಷ್ಕ್ರಿಯತೆ, ಆಡಳಿತಾತ್ಮಕ ಅಧ್ವಾನಗಳನ್ನು ಕುರಿತು ಮಾಡತೊಡಗಿದ ವಿಡಿಯೋಗಳು, ಗೇಲಿಯ- ವ್ಯಂಗ್ಯದ ಚಿತ್ರಗಳು- ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹತ್ತಾರು ಲಕ್ಷ ನೋಡುಗರನ್ನು ಸೆಳೆದಿದೆ. ವಿಡಂಬನೆಯನ್ನೇ ಹತಾರು ಆಗಿಸಿಕೊಂಡ ಹತ್ತಾರು ಕಾಕ್ರೋಚ್ ಪಾರ್ಟಿ ಖಾತೆಗಳು ಜಿರಳೆಯನ್ನೇ ತಮ್ಮ ಚಿಹ್ನೆಯಾಗಿ ಬಳಸಿಕೊಂಡಿವೆ.
ಸೂರ್ಯಕಾಂತ್ ವ್ಯಂಗ್ಯವಾಗಿ ಹೇಳಿದಂತೆ ತಮ್ಮನ್ನು ಸದಾಕಾಲ ಆನ್ಲೈನ್ ನಲ್ಲಿರುವ ನಿರುದ್ಯೋಗಿಗಳು ಮತ್ತು ಸೋಮಾರಿ ಕಾಕ್ರೋಚ್ ಗಳೆಂದು ಕಾಕ್ರೋಚ್ ಪಾರ್ಟಿಯ ಬೆಂಬಲಿಗರು ಕರೆದುಕೊಂಡಿದ್ದಾರೆ. ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಆಡಳಿತ ಪಕ್ಷಗಳ ಬಗ್ಗೆ ಭ್ರಮನಿರಸನಗೊಂಡ ಯುವಜನರು ದಂಗೆಯೆದ್ದು ಸರ್ಕಾರಗಳನ್ನು ಕಿತ್ತು ಹಾಕಿರುವ ವಿದ್ಯಮಾನ ಇತ್ತೀಚಿನ ವರ್ಷಗಳಲ್ಲಿ ನಡೆದಿರುವುದನ್ನು ಕಂಡಿದ್ದೇವೆ. ರೂಢಿಗತ ರಾಜಕೀಯ ಕುರಿತು ಎಳೆಯರು ತಮ್ಮ ಭ್ರಮನಿರಸನ ಹೊರ ಹಾಕಿದ್ದಾರೆ. ಭಾರತದಲ್ಲಿ ಮೋದಿಯವರ ಹಿಂದುತ್ವವಾದಿ ಬಿಜೆಪಿಯ ಕುರಿತ ಟೀಕೆ ವಿಮರ್ಶೆಗಳು ಕ್ರಮೇಣ ಹೆಚ್ಚತೊಡಗಿವೆ. ಮೋದಿ ಸರ್ಕಾರ ಬಿತ್ತಿ ಬೆಳೆಯತೊಡಗಿರುವ ದ್ವೇಷ ಮತ್ತು ಧಾರ್ಮಿಕ ಧೃವೀಕರಣ, ಆರ್ಥಿಕ ಹಿಂಜರಿತಗಳ ನಡುವೆ ಅಧಿಕಗೊಳ್ಳುತ್ತಲೇ ನಡೆದಿರುವ ಅಸಮಾನತೆಯ ಕುರಿತು ಅಸಮಾಧಾನಗೊಂಡಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ ಭಾರತದ ಪದವೀಧರರ ಪೈಕಿ 25 ವರ್ಷ ವಯೋಮಾನದ ಕೆಳಗಿರುವ ಶೇ.40ರಷ್ಟು ಮಂದಿ ನಿರುದ್ಯೋಗಿಗಳು.
ಮೋದಿಯವರ ಬೆಂಬಲಿಗರು ಕಾಕ್ರೋಚ್ ಜನತಾ ಪಾರ್ಟಿಯನ್ನು ಒಂದು ಪೊಳ್ಳು ಪ್ರಹಸನವೆಂದು ಜರೆದಿದ್ದಾರೆ. ಹಾಗೆ ಜರೆಯುತ್ತಲೇ ಕೀಟನಾಶಕ ಬಳಸಿ ಜಿರಳೆಗಳನ್ನು ಕೊಂದು ಹಾಕಬೇಕೆಂದು ಕೆರಳಿ ತೀವ್ರ ಅಸಹನೆ ಕಕ್ಕಿದ್ದಾರೆ.
ಕಡು ಭ್ರಷ್ಟಾಚಾರ, ಏರುಮುಖದ ಹಣದುಬ್ಬರ, ದುರಾಡಳಿತದ ವಿರುದ್ಧ ಸಿಡಿದಿತ್ತು ಬಿಹಾರದ 1974ರ ವಿದ್ಯಾರ್ಥಿ ಆಂದೋಲನ . ವಿದ್ಯಾರ್ಥಿನಾಯಕರು ಗಾಂಧೀವಾದಿ-ಸಮಾಜವಾದಿ ಜಯಪ್ರಕಾಶ ನಾರಾಯಣ ಅವರನ್ನು ನಾಯಕತ್ವ ವಹಿಸುವಂತೆ ಮನ ಒಲಿಸಿದ್ದರು. ಎರಡು ತಿಂಗಳ ನಂತರ ಪಟನಾದ ಗಾಂಧೀ ಮೈದಾನದಲ್ಲಿ ನಡೆದ ದೈತ್ಯ ಸಾರ್ವಜನಿಕ ರ್ಯಾಲಿಯಲ್ಲಿ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ್ದರು ಜೇಪಿ. ದೇಶದ ರಾಜಕೀಯ, ಸಾಮಾಜಿಕ ಆರ್ಥಿಕ ವ್ಯವಸ್ಥೆಗಳ ಆಮೂಲಾಗ್ರ ಬದಲಾವಣೆಯ ಅಗತ್ಯವನ್ನು ಸಾರಿದ್ದರು. ವರ್ಷ ಕಾಲ ಕಾಲೇಜುಗಳನ್ನು ಬಹಿಷ್ಕರಿಸಿ ಸರ್ವಾಧಿಕಾರದ ವಿರುದ್ದ ಜನಪರ ಹೋರಾಟ ಕಟ್ಟುವಂತೆ ಆಗ್ರಹಿಸಿದ್ದರು. ಇಂದಿರಾಗಾಂಧೀಯವರ ಸರ್ಕಾರಕ್ಕೆ ಸವಾಲೆಸೆದಿದ್ದರು. ಕಾಲಾನುಕ್ರಮದಲ್ಲಿ ದೇಶಾದ್ಯಂತ ಹರಡಿಕೊಂಡಿತ್ತು ಈ ಆಂದೋಲನ. ಕಡೆಗೆ 1975ರಲ್ಲಿ ಇಂದಿರಾ ಅವರು ರಾಷ್ಟ್ರವ್ಯಾಪಿ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದರು. ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ನೂಕಿದ್ದರು. ಸಂಪೂರ್ಣ ಕ್ರಾಂತಿಯ ಕರೆಯು 1977ರಲ್ಲಿ ತುರ್ತುಪರಿಸ್ಥಿತಿಯ ಅಂತ್ಯ ಮತ್ತು ಜನತಾ ಪಾರ್ಟಿಯ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ದಾರಿ ಮಾಡಿತ್ತು. ಆದರೆ ಈ ಸ್ಪಪ್ನ ಅನತಿಕಾಲದಲ್ಲಿ ಒಡೆದು ಹೋಗಿತ್ತು. ನಾಯಕರ ಅಧಿಕಾರದಾಸೆಗಳು, ಸ್ವಪ್ರತಿಷ್ಠೆಗಳು, ಒಳಜಗಳಗಳು ತಾರಕಕ್ಕೇರಿ ಪುನಃ ಇಂದಿರಾ ಸರ್ಕಾರವೇ ಆರಿಸಿ ಬರುವಂತಾಗಿತ್ತು.
ಆದರೆ ಸಂಪೂರ್ಣ ಕ್ರಾಂತಿಯ ವೈಫಲ್ಯವೇ ಶಾಶ್ವತ ಸತ್ಯವೇನೂ ಅಲ್ಲ, ಹೊಸತನ್ನು ಕಟ್ಟುವ ಕನಸಿಗೆ ತೋಡಿದ ಗೋರಿಯೇನೂ ಆಗಬೇಕಿಲ್ಲ. ಆಶಾವಾದ ಮತ್ತು ಸಕಾರಾತ್ಮಕ ಪ್ರವೃತ್ತಿ ಮನುಷ್ಯ ಕುಲವನ್ನು ಅದರ ಪ್ರಗತಿಯನ್ನು ಜೀವಂತವಾಗಿ ಇರಿಸಬಲ್ಲದು. ಜನಾಂದೋಲನಗಳಿಗೆ ಸರ್ವಾಧಿಕಾರದ ಗದ್ದುಗೆ ಮುಕುಟಗಳನ್ನು ಹುಡಿ ಹಾರಿಸಬಲ್ಲ ಅಗಾಧ ಸಾಮರ್ಥ್ಯವಿದೆ.




