ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿ-ಮೂಡಿಗೆರೆ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಗೆ 2024ರಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ, ಅಂಗಡಿ-ತೋಟಗಳ ತೆರವು ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರದಂತಹ ಪ್ರಕ್ರಿಯೆಗಳಿಗೇ ಹೆಚ್ಚು ಸಮಯ ವ್ಯರ್ಥವಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ, ಸ್ಥಳೀಯ ಶಾಸಕರಾಗಿ ಜನಸಾಮಾನ್ಯರ ಪ್ರಶ್ನೆಗಳಿಗೆ ತಾವು ಉತ್ತರಿಸಬೇಕಾದ ಪರಿಸ್ಥಿತಿ ಇದೆ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ನಕಲಿ ನಾಟಿ ತುಪ್ಪ; ಆಹಾರ ಅಧಿಕಾರಿಗಳು ದಾಳಿ
ಹಾಗೆಯೇ, ಅಧಿಕಾರಿಗಳು ಕಾಮಗಾರಿ ಆರಂಭಿಸಲು ಸೆಪ್ಟೆಂಬರ್ 15ರ ಗಡುವು ನೀಡಿದ್ದು, ಜನರಿಗೆ ಅನುಕೂಲವಾಗುವಂತೆ ನಿಗದಿತ ದಿನಾಂಕದೊಳಗೆ ಕೆಲಸ ಆರಂಭವಾಗಲಿ. ಈ ಕ್ಷೇತ್ರದಲ್ಲಿ ಜನಸಂಖ್ಯೆ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೂಡಿಗೆರೆ ಮತ್ತು ಚಿಕ್ಕಮಗಳೂರು ಸಂಪರ್ಕ ರಸ್ತೆ ಇದಾಗಿರುವುದರಿಂದ ಧರ್ಮಸ್ಥಳಕ್ಕೆ ತೆರಳುವ ಭಕ್ತರಿಗೆ, ಚಾರಣಿಗರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಮುಖ್ಯವಾದ ರಸ್ತೆಯಾಗಿದೆ ಎಂದು ಶಾಸಕಿ ನಯನ ಮೋಟಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.





