ಛಾಯಾಗ್ರಾಹಕರ ವೃತ್ತಿ ಭದ್ರತೆ, ಕುಟುಂಬದ ಕಲ್ಯಾಣ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಛಾಯಾಗ್ರಾಹಕರ ಆಕಾಡೆಮಿ ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ಫೋಟೋಗ್ರಾಫರ್ ಅಸೋಸಿಯೇಷನ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಎಸ್. ಹಿರೇಮಠ ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊಸಕೊರ್ತಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಬೀಳಗಿ ತಾಲೂಕು ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ, ಪದಗ್ರಹಣ ಸಮಾರಂಭ ಹಾಗೂ ‘ಛಾಯಾ ವೈಭವ-2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಛಾಯಾಗ್ರಾಹಕರಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಂಘಟನೆ ಶ್ರಮಿಸುತ್ತಿದೆ. ಕೆ.ಪಿ.ಎಯ ‘ಆಸರೆ’ ಯೋಜನೆಯ ಮೂಲಕ ಸಂಕಷ್ಟದಲ್ಲಿರುವ ಛಾಯಾಗ್ರಾಹಕರ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ವೃತ್ತಿಪರರಿಗೆ ಸರಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯಲು ಮುಂದಿನ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹುಚ್ಚೇಶ್ವರ ಮಠದ ಫಕೀರೇಶ್ವರ ಮಹಾಸ್ವಾಮಿ ಮಾತನಾಡಿ, ಛಾಯಾಗ್ರಾಹಕರು ಶಿಸ್ತು ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ವೃತ್ತಿಯ ಘನತೆ ಕಾಪಾಡಿಕೊಳ್ಳಬೇಕು ಎಂದರು.
ಕೆ.ಪಿ.ಎ ಜಿಲ್ಲಾಧ್ಯಕ್ಷ ಜಗದೀಶ ಅಂಬಿಗೇರ ಛಾಯಾಗ್ರಾಹಕರು ಸಂಘಟಿತರಾಗಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ತಾಲೂಕು ಅಸೋಸಿಯೇಷನ್ ಅಧ್ಯಕ್ಷ ಗುರುನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಮತ್ತು ಪ್ರತಿಭಾವಂತ ಛಾಯಾಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.





