ಆಂಧ್ರಪ್ರದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ಸಿಪಿ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು 2023ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯ್ದೆ’ಯನ್ನು ತಾವು ಹಿಂದೆ ಬೆಂಬಲಿಸಿದ್ದಕ್ಕೆ ಬಹಿರಂಗವಾಗಿ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗದಂತಹ (ECI) ಅತ್ಯುನ್ನತ ಮತ್ತು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯ ನಿಷ್ಪಕ್ಷಪಾತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವರು ನೀಡಿರುವ ಈ ಹೊಸ ಹೇಳಿಕೆ ಇದೀಗ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
2023ರ ಡಿಸೆಂಬರ್ನಲ್ಲಿ ಸಂಸತ್ತಿನಲ್ಲಿ ಈ ವಿವಾದಾತ್ಮಕ ಮಸೂದೆ ಮಂಡನೆಯಾದಾಗ, ದೇಶಾದ್ಯಂತ ಪ್ರತಿಪಕ್ಷಗಳು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಹೊರಗಿಟ್ಟಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಧರಣಿ ನಡೆಸಿದ್ದವು.
ಇದನ್ನೂ ಓದಿ: ಗ್ಯಾನೇಶ್ ಕುಮಾರ್ ಗಂಡಾಂತರ – ಪಾರಾಗುವರೇ ಮೋದಿ?
ಆದರೆ, ಅಂದು ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಜಗನ್ ಅವರ ವೈಎಸ್ಆರ್ಸಿಪಿ ಪಕ್ಷವು ಈ ವಿರೋಧದ ಅಲೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರದ ಮಸೂದೆಗೆ ಮುಕ್ತ ಬೆಂಬಲ ನೀಡಿ ಅಚ್ಚರಿ ಮೂಡಿಸಿತ್ತು. ಅಂದು ಸಂಸತ್ತಿನಲ್ಲಿ ಮತ್ತು ಮಾಧ್ಯಮಗಳ ಮುಂದೆ ವೈಎಸ್ಆರ್ಸಿಪಿ ನಾಯಕರು ಸಮರ್ಥನೆಗೆ ಇಳಿದಿದ್ದರು.
“ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ತನ್ನದೇ ಆದ ಸಾರ್ವಭೌಮತ್ವ ಹಾಗೂ ಜವಾಬ್ದಾರಿಗಳಿವೆ. ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕರನ್ನೊಳಗೊಂಡ ಆಯ್ಕೆ ಸಮಿತಿಯು ಆಡಳಿತಾತ್ಮಕ ಪಾರದರ್ಶಕತೆಗೆ ಪೂರಕವಾಗಿದೆ. ಕಾರ್ಯಾಂಗದ ಅಧಿಕಾರ ವ್ಯಾಪ್ತಿಯಲ್ಲಿ ನ್ಯಾಯಾಂಗದ ಅತಿಹೆಚ್ಚು ಹಸ್ತಕ್ಷೇಪ ತಡೆಯಲು ಈ ಕಾನೂನು ಸೂಕ್ತವಾಗಿದೆ” ಎಂದು ಸಮರ್ಥಿಸಿಕೊಂಡಿದ್ದರು. ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧ ಮತ್ತು ರಾಜಕೀಯ ಲೆಕ್ಕಾಚಾರಗಳಿಂದಾಗಿ ಜಗನ್ ಈ ನಿರ್ಧಾರ ಕೈಗೊಂಡಿದ್ದರು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.
ಆದರೆ, ಕಾಲಾಂತರದಲ್ಲಿ ರಾಜಕೀಯ ಪರಿಸ್ಥಿತಿಗಳು ಬದಲಾಗಿವೆ. ರಾಜ್ಯದಲ್ಲೂ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ನಡೆದ ಚುನಾವಣೆಗಳ ಅನುಭವ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ನೈಜ ಚಿತ್ರಣವನ್ನು ಕಣ್ಣಾರೆ ಕಂಡ ಬಳಿಕ, ಜಗನ್ ತಮ್ಮ ಹಳೆಯ ನಿಲುವನ್ನು ಸಂಪೂರ್ಣವಾಗಿ ಹಿಂಪಡೆದಿದ್ದಾರೆ.
ಈಗಾಗಲೇ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಇತರೆ ಇಬ್ಬರು ಆಯುಕ್ತರ ನಿರ್ಧಾರಗಳನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬ ತನಿಖಾ ವರದಿ ಬಹಿರಂಗವಾಗಿದೆ. ಇದಾದ ಬಳಿಕ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಜೆಪಿ, ವಿಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಲೇ ಇದೆ. ಹಲವರ ಬಂಧನ ನಡೆಯುತ್ತಲೇ ಇದೆ. ಮುಖ್ಯವಾಗಿ ಚುನಾವಣಾ ಆಯುಕ್ತರ ಆಯ್ಕೆ ಕಾಯ್ದೆಯಲ್ಲೇ ನ್ಯಾಯವಿಲ್ಲ. ಕೇಂದ್ರ ಸರ್ಕಾರ ತನಗೆ ಬೇಕಾದ ಆಯುಕ್ತರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ಚರ್ಚೆಗಳು ನಡೆದವು. ಈ ಎಲ್ಲ ಬೆಳವಣಿಗೆ ನಡುವೆ ಜಗನ್ ಮೋಹನ್ ರೆಡ್ಡಿ ಹೇಳಿಕೆ ಬಂದಿದೆ.
ಇತ್ತೀಚೆಗೆ ಸಾರ್ವಜನಿಕವಾಗಿ ಮಾತನಾಡುತ್ತಾ, ಪ್ರಸ್ತುತ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಕಟುವಾಗಿ ಟೀಕಿಸಿರುವ ಜಗನ್ ಮೋಹನ್ ರೆಡ್ಡಿ ನೀಡಿದ ರೂಪಕವೊಂದು ಈಗ ಭಾರೀ ಚರ್ಚೆಯಲ್ಲಿದೆ. “ವಿದ್ಯಾರ್ಥಿಗಳೇ ತಮ್ಮ ಪರೀಕ್ಷಕರನ್ನು ತಾವೇ ಆಯ್ಕೆ ಮಾಡಿಕೊಂಡರೆ ಫಲಿತಾಂಶ ಹೇಗಿರುತ್ತದೆಯೋ, ಪ್ರಸ್ತುತ ಇರುವ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯೂ ಹಾಗೆಯೇ ಇದೆ. ಆಡಳಿತಾರೂಢ ಸರ್ಕಾರವೇ ಸ್ಪಷ್ಟ ಬಹುಮತ ಹೊಂದಿರುವ ಸಮಿತಿಯು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಮತ್ತು ಪಾರದರ್ಶಕತೆಗೆ ಕೊಡಲಿಪೆಟ್ಟು” ಎಂದು ಜಗನ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
2023ರ ಹೊಸ ಕಾಯ್ದೆಯ ಪ್ರಮುಖ ಲೋಪವೆಂದರೆ, ಇದು ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಸಂಪೂರ್ಣವಾಗಿ ಹೊರಗಿಟ್ಟಿತು. ಪ್ರಧಾನಮಂತ್ರಿ, ಪ್ರಧಾನಿಯವರು ನಾಮನಿರ್ದೇಶನ ಮಾಡುವ ಕೇಂದ್ರ ಸಚಿವರೊಬ್ಬರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರು (ಅಥವಾ ಅತಿ ದೊಡ್ಡ ವಿರೋಧ ಪಕ್ಷದ ನಾಯಕ) ಮಾತ್ರವಿರುವ ಈ ಸಮಿತಿಯಲ್ಲಿ ಸರ್ಕಾರದ ಪರವಾಗಿ ಇಬ್ಬರು ಸದಸ್ಯರಿದ್ದರೆ, ವಿರೋಧ ಪಕ್ಷದವರು ಕೇವಲ ಒಬ್ಬರೇ ಇರುತ್ತಾರೆ. ಇದು ಸರ್ಕಾರದ ಮುಷ್ಟಿಯಲ್ಲಿ ಆಯೋಗ ಸಿಲುಕಿಕೊಳ್ಳಲು ದಾರಿ ಮಾಡಿಕೊಡುತ್ತದೆ ಎಂಬುದು ಪ್ರಮುಖ ಆತಂಕವಾಗಿತ್ತು.
ಈಗ ಜಗನ್ ಮೋಹನ್ ರೆಡ್ಡಿ ಕೂಡ ಇದೇ ಅಭಿಪ್ರಾಯವನ್ನು ದೃಢಪಡಿಸಿದ್ದು, ಚುನಾವಣಾ ಆಯೋಗದ ಮೇಲೆ ಜನರಿಗೆ ಇರುವ ನಂಬಿಕೆ ಮತ್ತು ವಿಶ್ವಾಸ ಅಚ್ಚಳಿಯದೆ ಉಳಿಯಬೇಕಾದರೆ, ಆಯ್ಕೆ ಸಮಿತಿಯಲ್ಲಿ ಮತ್ತೆ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಮರಳಿ ಸೇರ್ಪಡೆಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಇನ್ನು ರಾಜಕೀಯ ತಜ್ಞರ ಪ್ರಕಾರ, ಅಧಿಕಾರದಲ್ಲಿದ್ದಾಗ ಅಥವಾ ರಾಜಕೀಯ ಅನುಕೂಲಕ್ಕಾಗಿ ಕೆಲವು ಮಸೂದೆಗಳನ್ನು ಕಣ್ಣು ಮುಚ್ಚಿ ಬೆಂಬಲಿಸುವ ಪ್ರಾದೇಶಿಕ ನಾಯಕರಿಗೆ, ಅಧಿಕಾರ ಕಳೆದುಕೊಂಡ ಬಳಿಕವಷ್ಟೇ ವ್ಯವಸ್ಥೆಯ ನೈಜ ಲೋಪಗಳು ಅರಿವಿಗೆ ಬರುತ್ತವೆ ಎಂದು ಜಗನ್ ಅವರ ಈ ಘಟನೆ ಒಂದು ಪ್ರಮುಖ ನಿದರ್ಶನವಾಗಿದೆ. ಅಂದು ವಿಪಕ್ಷಗಳ ಎಚ್ಚರಿಕೆಯನ್ನು ಕಡೆಗಣಿಸಿ ಮಸೂದೆಗೆ ಮತ ಹಾಕಿದ್ದ ವೈಎಸ್ಆರ್ಸಿಪಿ, ಇಂದು ಅದೇ ಕಾಯ್ದೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳುತ್ತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.





