ವಯೋ ನಿವೃತ್ತಿ ಶಿಕ್ಷಕಿ ಜಿ.ಲಕ್ಷ್ಮೀದೇವಮ್ಮ ಚಿಂತಾಮಣಿ ತಾಲ್ಲೂಕು ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಹೇಳಿದರುಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿ,ನಿವೃತ್ತರಾದ ಶಿಕ್ಷಕಿ ಮಾರ್ಗದರ್ಶನ ಮಕ್ಕಳಿಗೆ ಅವಶ್ಯವಾಗಿದೆ.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಸೇವಾ ನಿವೃತ್ತಿ ಬದುಕು ಅತ್ಯಂತ ನೆಮ್ಮದಿಯಾಗಲಿʼ ಎಂದು ಹಾರೈಸಿದರು.
ಶಿಕ್ಷಕ ಕೆ.ಬಿ.ಆಂಜನೇಯ ರೆಡ್ಡಿ ಮಾತನಾಡಿ ಲಕ್ಷ್ಮೀದೇವಮ್ಮ ಸುದೀರ್ಘ 34 ವರ್ಷಗಳಲ್ಲಿ ಚಿಂತಾಮಣಿ, ಬಾಗೇಪಲ್ಲಿ ತಾಲ್ಲೂಕು ಪೆದ್ದತುಮಕೇಪಲ್ಲಿ ಕಾನಗಮಾಕಲಪಲ್ಲಿ, ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಘಂಟಂವಾರಿಪಲ್ಲಿ ಶಾಲೆಯಲ್ಲಿ
ಅಪಾರ ವಿದ್ಯಾರ್ಥಿ ಬಳಗ ಹೊಂದಿದ್ದು, ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇವರು ಸಹೃದಯಿ, ಸ್ನೇಹಜೀವಿ, ಸಮಯ ಪಾಲನೆ ಮತ್ತು ಸರಳತೆಯ ವ್ಯಕ್ತಿತ್ವದಿಂದಲೇ ಇಡೀ ತಾಲೂಕಿಗೆ ಚಿರಪರಿಚಿತರು. ಕನ್ನಡ ಭಾಷಾ ಶಿಕ್ಷಕಿಯಾಗಿ 34 ವರ್ಷಗಳ ಕಾಲ ದಣಿವರಿಯದೇ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕನ್ನಡ ಭಾಷಾ ಶಿಕ್ಷಕಿ ಜಿ.ಲಕ್ಷ್ಮೀದೇವಮ್ಮ ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ಇದನ್ನು ಓದಿದ್ದೀರಾ..? ಕೋಲಾರ | ಕಾರ್ಮಿಕರ ಕನಿಷ್ಠ ವೇತನ 35 ಸಾವಿರಕ್ಕಾಗಿ ಸಿಐಟಿಯು ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ – ಈ ದಿನ.ಕಾಮ್
ಈ ಸಂದರ್ಭದಲ್ಲಿ ಶಿಕ್ಷಕರಾದ ಎನ್.ಎನ್.ಸಂಧ್ಯಾ,ಸಿ.ನಾರಾಯಣ ಸ್ವಾಮಿ, ಜಿ.ವಿ.ಚಂದ್ರಶೇಖರ, ಶರ್ಮಿಳಾ ,ಗೌರಿಬಿದನೂರು ಶಿಕ್ಷಕ ಮುನಿರಾಜು ,ಶಿಕ್ಷಕಿ ಜಿ.ಅಶ್ವತ್ಥಮ್ಮ ,ಎಂ.ವಿ. ರಾಜಾರೆಡ್ಡಿ ,ಜಿ.ಸಂದೀಪ್, ಮಗಳು ಆರ್.ಪಲ್ಲವಿ ಹಾಗೂ ಅಳಿಯ ವೇಣು ಮತ್ತಿತರರು ಶುಭಾಶಯಗಳನ್ನು ಕೊರಿದ್ದಾರೆ




