ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ ಇರುವ ಚೌಧರಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಯಾವುದೇ ಮುಖ್ಯ ಕಾರಣವಿಲ್ಲದೆ ಸುಮಾರು 150 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆಂದು ಆರೋಪಿಸಿ ಸಿಪಿಐಎಂ ಮತ್ತು ಸಿಐಟಿಯು ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
“ಹೆಂಗಸರ ಸಮಸ್ಯೆ, ತುರ್ತು ಸಂದರ್ಭದಲ್ಲಿ ರಜೆ ಮತ್ತಿತರ ವಿಚಾರಗಳಿಗೂ ಮಾನವೀಯತೆ ತೋರುವುದಿಲ್ಲ. ಬುಧವಾರ ಸಂಜೆ 5.30 ಗಂಟೆಗೆ ಬಂದ ಅಧಿಕಾರಿಗಳು, ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಹೇಳಿ ಹೊರಟರು. ನಮ್ಮ ಮುಂದಿನ ಗತಿಯೇನು?” ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.
ಈ ವೇಳೆ ಮಾತನಾಡಿದ ಸಿಐಟಿಯು ಮುಖಂಡ ಕೆ.ಮುನಿಯಪ್ಪ, “ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಏಕಾಏಕಿ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮತ್ತು ನೋಟಿಸ್ ನೀಡದೇ ಕೆಲಸದಿಂದ ತೆಗೆದು ಹಾಕಲಾಗಿದೆ. ಯಾವುದೇ ಕಾರ್ಮಿಕನನ್ನು ಕೆಲಸದಿಂದ ತೆಗೆಯಬೇಕಾದರೆ ಹಲವಾರು ನಿಯಮ ನಿಬಂಧನೆಗಳಿರುತ್ತವೆ. ಆದರೆ ಈ ಫ್ಯಾಕ್ಟರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮಹಿಳಾ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಯಿಲ್ಲ, ಮೇಲಾಧಿಕಾರಿಗಳು ನಿಂದಿಸುತ್ತಾರೆ ಎಂಬ ದೂರುಗಳಿವೆ. ಕಾರ್ಮಿಕ ವಿರೋಧಿ ನಿಲುವುಗಳನ್ನು ಅನುಸರಿಸುತ್ತಿದ್ದು, ಕೂಡಲೇ ಅವರ ಕ್ಷಮೆಯಾಚಿಸಬೇಕು” ಎಂದರು.
ಗಾರ್ಮೆಂಟ್ಸ್ ನ ಎಚ್.ಆರ್ ಮ್ಯಾನೇಜರ್ ಮಹೇಂದ್ರ ಮಾತನಾಡಿ, “ಪ್ರೊಡಕ್ಷನ್ ಕಡಿಮೆಯಾಗಿದ್ದು, ಕಾರ್ಮಿಕರನ್ನು ಕೆಲಸಕ್ಕೆ ಬರದಂತೆ ಸೂಚಿಸಲಾಗಿತ್ತು. ನಮ್ಮ ಗಾರ್ಮೆಂಟ್ಸ್ ಮಾಲೀಕರು ವಿದೇಶದಲ್ಲಿದ್ದು, ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹಾಗಾಗಿ ನಾಳೆಯಿಂದ ಕೆಲಸಕ್ಕೆ ಬರಬಹುದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಹಿರಿಯ ವಕೀಲ ದಿ.ಹರಿಕುಮಾರ್ ಸ್ಮರಣಾರ್ಥ 8 ದಿನಗಳ ಕ್ರಿಕೆಟ್ ಕ್ರೀಡಾಕೂಟ
ಚೌಧರಿ ಗಾರ್ಮೆಂಟ್ಸ್ ಕಾರ್ಮಿಕರನ್ನು ಏಕಾಏಕಿ ಕೆಲಸಕ್ಕೆ ಬರಬೇಡಿ ಎಂಬ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಲಾಗಿದ್ದು, ಅಲ್ಲಿನ ಮಾಲೀಕರು, ಆಡಳಿತ ಮಂಡಳಿಯವರು ಸಭೆ ನಡೆಸಿ, ನಿರ್ಧಾರ ತೆಗೆದುಕೊಳ್ಳಬೇಕು. ಕಾರ್ಮಿಕ ಕಾನೂನುಗಳ ಅಡಿಯಲ್ಲೆ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಯಾವುದೇ ಕಾರ್ಮಿಕರನ್ನು ಕೆಲಸಕ್ಕೆ ಬರದಂತೆ ಅಡ್ಡಿ ಪಡಿಸಬಾರದು ಎಂದು ಎಚ್.ಆರ್.ಮ್ಯಾನೇಜರ್ ಮತ್ತಿತರರಿಗೆ ಸೂಚಿಸಲಾಗಿದೆ- ರಾಕೇಶ್, ಕಾರ್ಮಿಕ ನಿರೀಕ್ಷಕ ,ಬಾಗೇಪಲ್ಲಿ
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಜಿ.ಕೃಷ್ಣಪ್ಪ, ವಾಲ್ಮೀಕಿ ಅಶ್ವತ್ಥಪ್ಪ ಸೇರಿದಂತೆ ಹಲವಾರು ಮಂದಿ ಇದ್ದರು.