ರಾಜ್ಯ ರಾಜಧಾನಿ ಬೆಂಗಳೂರು ನಗರೀಕರಣದ ಹಿಂದೆ ಬಿದ್ದು, ನಗರದಲ್ಲಿರುವ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಕಡಿದ ಮರಗಳ ಜಾಗದಲ್ಲಿ ಹೊಸ ಗಿಡ ನೆಡುವಲ್ಲಿಯೂ ಹಿಂದೆ ಬಿದ್ದಿದೆ. ಮಾನವ ತಾನು ಜೀವಿಸಲು ಎಲ್ಲ ರೀತಿಯ ಅನುಕೂಲ ಮಾಡಿಕೊಳ್ಳುವ ಧಾವಂತದಲ್ಲಿ ಕೀಟ, ಪ್ರಾಣಿ, ಪಕ್ಷಿ ಹಾಗೂ ಜಲಚರ ಜೀವಿ ಸೇರಿದಂತೆ ಕೋಟ್ಯಂತರ ಜೀವಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾನೆ. ಮಹಾನಗರಿ ತನ್ನ ಹಸಿರು ಸೌಂದರ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಈ ವೇಳೆ, ನಿಸರ್ಗದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ದುಂಬಿ-ಕೀಟಗಳ ಸಂರಕ್ಷಣೆಗೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ವಿಶಿಷ್ಟ ವಿಷಯದೊಂದಿಗೆ ‘ಕೀಟ ಕೆಫೆ’ ಆರಂಭವಾಗಿದೆ.
ಕೀಟಗಳ ಸಂರಕ್ಷಣೆಗಾಗಿ ತೋಟಗಾರಿಕೆ ಇಲಾಖೆ ಹೊಸ ವಿಷಯದೊಂದಿಗೆ ಮುಂದೆ ಬಂದಿದ್ದು, ಇದಕ್ಕೆ ವಿಭಿನ್ನ ಇಂಡಿಯಾ ಫೌಂಡೇಷನ್‌ನ ‘ಸಾಮಾಜಿಕ ಹೊಣೆಗಾರಿಕೆ ನಿಧಿ’(ಸಿಎಸ್‌ಆರ್) ಸಾಥ್ ನೀಡಿದೆ.
ತೋಟಗಾರಿಕೆ ಇಲಾಖೆ ಹೊಸ ಪರಿಕಲ್ಪನೆಯೊಂದಿಗೆ ಸಸ್ಯಕಾಶಿಯ ಬ್ಯಾಂಡ್ ಸ್ಟ್ಯಾಂಡ್ ಬಳಿ ಕೀಟಗಳಿಗೆ ಮರದ ಮನೆ ತಯಾರು ಮಾಡಲಾಗಿದೆ. ಇದಕ್ಕೆ ‘ಇನ್‌ಸೆಕ್ಟ್ ಕೆಫೆ’ ಎಂದು ಹೆಸರಿಡಲಾಗಿದೆ. ಈ ಕೆಫೆಯನ್ನು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್ ಅವರು ಶುಕ್ರವಾರ ಉದ್ಘಾಟಿಸಿದರು.
ನಗರೀಕರಣದಿಂದ ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೀಟ ಕೆಫೆ ತಲೆ ಎತ್ತಿದೆ.
ಏನಿದು ಕೀಟ ಕೆಫೆ?
ನೈಸರ್ಗಿಕ ಆಹಾರ ಸರಪಳಿಯ ಪ್ರಥಮ ಹಂತದಲ್ಲಿ ಕ್ರಿಮಿ, ಕೀಟ, ದುಂಬಿಗಳು ಪ್ರಮುಖ ಪಾತ್ರ ವಹಿಸುತ್ತವೆ. ನಗರೀಕರಣದ ದೆಸೆಯಲ್ಲಿ ಪ್ರಕೃತಿ ದತ್ತವಾಗಿದ್ದಂತಹ ಹಸಿರು ತಾಣಗಳು, ಹುಲ್ಲುಗಾವಲುಗಳೂ ಮರೆಯಾಗಿವೆ. ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ.
ಈ ಹಿನ್ನೆಲೆಯಲ್ಲಿ ಸರ್ವ ರೀತಿಯಲ್ಲಿಯೂ ಕೀಟಗಳಿಗೆ ಪೂರಕವಾಗಿರಬಲ್ಲ ಹೊಸ ಪರಿಕಲ್ಪನೆಯೇ ಕೀಟ ಕೆಫೆ, ಹುಲ್ಲು, ಕೀಟಗಳ ನಡುವೆ, ಎಲೆಗಳ ಮರೆಯಲ್ಲಿ, ಮರಗಳ ರಂದ್ರ/ಪೊಟರೆಯಲ್ಲಿ ದುಂಬಿ, ಕೀಟ ಇತ್ಯಾದಿಗಳಿಗಾಗಿ ಕೀಟ ಕೆಫೆ ಮೂಲ ಆಶ್ರಯ ತಾಣವಾಗಲಿದೆ.
ಮರದ ಫ್ರೇಮ್‌ಗಳಿಂದ ಸಣ್ಣ ಮನೆಯಾಕಾರದಲ್ಲಿ ಕೀಟ ಕೆಫೆ ವಿನ್ಯಾಸಗೊಳಿಸಲಾಗಿದೆ. ಇದನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಿ, ಪ್ರತಿ ವಿಭಾಗದಲ್ಲಿ ಸಣ್ಣ ಮತ್ತು ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ನಾನಾ ರೀತಿಯ ಸಸ್ಯಗಳ ಕಟ್ಟಿಗೆಗಳನ್ನು ಒಂದಕ್ಕೊಂದು ಅಂಡಿಕೊಂಡಿರುವಂತೆ ಜೋಡಿಸಲಾಗಿದೆ. ಈ ನೂತನ ರಚನೆಯು ಎಲ್ಲ ಬಗೆಯ ಕೀಟ, ದುಂಬಿಗಳು ನೆಲೆಸಲು ಪೂರಕ ತಾಣವಾಗಿದೆ. ಕೀಟಗಳು ಸಂತಾನೋತ್ಪತ್ತಿ ಹೊಂದಿ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಲಿದೆ.
ಕೀಟ-ದುಂಬಿಗಳಿಗೆ ಸರ್ವ ರೀತಿಯಲ್ಲಿಯೂ ಸಹಕಾರಿಯಾಗುವಂತೆ ಒಣ ಮರವನ್ನು ಕೊರೆಯುವ ದುಂಬಿ ಪ್ರಭೇದಗಳಿಗೆ ಬೇಕಾದ ಮರಗಳು ಹಾಗೂ ಮಣ್ಣಿನೊಳಗೆ ಕೊರಕಲು ಮಾಡಿ ಅಲ್ಲಿ ಅಡಗಿಕೊಳ್ಳುವ ಕೀಟಗಳಿಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಪೌರಕಾರ್ಮಿಕರ ಅನುದಾನ ರದ್ದುಗೊಳಿಸಿದ ಸರ್ಕಾರ: ಖಂಡನೆ
ಲಾಲ್‌ಬಾಗ್‌ನಲ್ಲಿ ಪ್ರಸ್ತುತ ದೇಶ-ವಿದೇಶದ 3,000ಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿವೆ. ಜತೆಗೆ ಅಸಂಖ್ಯಾತ ಜೀವರಾಶಿಯ ಕೇಂದ್ರವಾಗಿರುವ ಸಸ್ಯಕಾಶಿಯಲ್ಲಿ ಕಾರ್ಪೆಂಟರ್ ಬೀ, ಬಿಂಬಲ್ ಬೀ ಇತ್ಯಾದಿ ಪ್ರಭೇದದ ಕೀಟಗಳಿವೆ. ಜತೆಗೆ ಗೂಡು ಕಟ್ಟಿ ಜೇನು ಸಂಗ್ರಹಿಸುವ ದುಂಬಿಗಳಿವೆ. ಇವೆಲ್ಲ ಕಡಿಮೆ ಸಂಖ್ಯೆಯಲ್ಲಿವೆ. ಆದರೆ, ಗೂಡು ಕಟ್ಟುವುದರ ಬದಲು ಒಂಟಿಯಾಗಿ ಒಣ ಮರವನ್ನು ಕೊರೆದು ತೂತು ಮಾಡಿ ಅಲ್ಲೇ ಬದುಕುವ ಒಂಟಿ-ದುಂಬಿಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಇಂಥವುಗಳಿಗೆ ಇನ್‌ಸೆಕ್ಟ್ ಕೆಫೆ ಉತ್ತಮ ಆಶ್ರಯ ತಾಣವಾಗಿದೆ.
ಲಾಲ್‌ಬಾಗ್ ಒಳಗೊಂಡಂತೆ ಕಬ್ಬನ್ ಉದ್ಯಾನವನ, ನಂದಿ ಗಿರಿಧಾಮ, ಕೃಷ್ಣರಾಜೇಂದ್ರ ಗಿರಿಧಾಮ, ರಾಜ್ಯವ್ಯಾಪ್ತಿಯ ಎಲ್ಲ ಹೊಸ ಸಸ್ಯಶಾಸ್ತ್ರೀಯ ತೋಟಗಳಲ್ಲಿಯೂ ಸಹ ಈ ಹೊಸ ಪರಿಕಲ್ಪನೆಯಡಿ 50 ಕ್ಕೂ ಹೆಚ್ಚು ಇನ್ ಸೆಕ್ಟ್ ಕೆಫೆಗಳನ್ನು ನಿರ್ಮಿಸಲು ತೋಟಗಾರಿಕೆ ಇಲಾಖೆ ಚಿಂತಿಸಿದೆ.
ರಾಜ್ಯ ವ್ಯಾಪಿ ಸರ್ವರೂ ಸಹಸ್ರಾರು ಕೀಟ ಕೆಫೆಗಳನ್ನು ಸ್ಥಾಪಿಸುವ ಮುಖೇನ ಕೀಟ ಸಂರಕ್ಷಣೆಗೆ ಮುಂದಾಗಬೇಕು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ತೊಟಗಾರಿಕೆ ಜಂಟಿ ಇಲಾಖೆ ನಿರ್ದೇಶಕ ಜಗದೀಶ್, “ಕೀಟಗಳಿಗೆ ಜೀವಿಸಲು ಹುಲ್ಲುಗಾವಲು, ಮರಗಳು, ಪೊಟರೆಗಳು ಬೇಕು. ಆದರೆ ನಗರೀಕರಣದಿಂದ ನಾವು ಇವುಗಳನ್ನೆಲ್ಲ ಕಳೆದುಕ್ಕೊಳ್ಳುತ್ತಿದ್ದೇವೆ. ಕೀಟಗಳು ವೃದ್ಧಿ ಹೊಂದಲು ಅವುಗಳಿಗೆ ಒಂದು ತಾಣಬೇಕು. ಇನ್‌ಸೆಕ್ಟ್ ಕೆಫೆ ಸಂಪೂರ್ಣ ಮರಗಳಿಂದ ಮಾಡಲಾಗಿದೆ. ನಾನಾ ಬಗೆಯ ಕಟ್ಟಿಗೆಗಳನ್ನು ಇಡಲಾಗುತ್ತಿದೆ. ಕೆಲವು ಮೃದುವಾದ ಕಟ್ಟಿಗೆಗಳಲ್ಲಿ ಕೀಟಗಳು ತಮಗೆ ಬೇಕಾದಂತೆ ಮನೆಯನ್ನು ನಿರ್ಮಿಸಿಕ್ಕೊಳ್ಳುತ್ತೇವೆ” ಎಂದರು.
“ಪರಿಸರದಲ್ಲಿ ಚಿಕ್ಕ ಕೀಟಗಳನ್ನು ತಿಂದು ಪಕ್ಷಿಗಳು ಬದುಕುತ್ತವೆ. ಇದರಿಂದ ಪರಿಸರ ವೃದ್ಧಿಹೊಂದಿತ್ತವೆ. ಲಾಲ್‌ಬಾಗ್‌ನಲ್ಲಿ ಒಟ್ಟು 10 ಕೀಟ ಕೆಫೆ ನಿರ್ಮಿಸಲಾಗುವುದು. ಸದ್ಯ ಸಾಂಕೇತಿಕವಾಗಿ ಒಂದು ಕೆಫೆಯನ್ನು ಮಾಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಉಳಿದ ಕೆಫೆಗಳನ್ನು ನಿರ್ಮಾಣ ಮಾಡಲಾಗುವುದು. ಕಬ್ಬನ್‌ಪಾರ್ಕ್‌ನಲ್ಲೂ 10 ಕೀಟ ಕೆಫೆ ನಿರ್ಮಾಣ ಮಾಡಲಾಗುವುದು. ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಾರ್ಕ್‌ಗಳಲ್ಲಿಯೂ ಈ ಯೋಜನೆ ಜಾರಿಗೆ ತರಲಾಗುವುದು. ಒಂದು ಚಿಕ್ಕ ಸೈಜ್‌ನ ಕೆಫೆ ನಿರ್ಮಾಣ ಮಾಡಲು ₹20 ಸಾವಿರ ಖರ್ಚಾಗಿದೆ” ಎಂದು ವಿವರಿಸಿದರು.