ಹೊಸ ಪಡಿತರ ಚೀಟಿಗಳನ್ನು ವಿತರಿಸಿದಷ್ಟೇ ಪ್ರಮಾಣದಲ್ಲಿ ಹಳೆಯ ಪಡಿತರ ಚೀಟಿಗಳನ್ನು ರದ್ದು ಪಡಿಸಬೇಕು. ಒಟ್ಟಾರೆ ಈಗಿರುವ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಿಸುವಂತಿಲ್ಲ, ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶವು ಅಧಿಕಾರಿಗಳನ್ನು ಇಕ್ಕಟ್ಟು ತಂದಿದೆ.
ರಾಜ್ಯದಲ್ಲಿ 10.88 ಲಕ್ಷ ಅಂತ್ಯೋದಯ ಮತ್ತು 1.16 ಕೋಟಿ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಹೊಸ ಕಾರ್ಡ್‌ಗಾಗಿ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಹಿಂದೆಯೇ ಇಲಾಖೆಯ ಈ ಆದೇಶ ಬಂದಿದೆ.
ಒಟ್ಟು 2.95 ಲಕ್ಷ ಅರ್ಜಿಗಳ ಪೈಕಿ, 2.78 ಲಕ್ಷ ಅರ್ಜಿಗಳ ಪರಿಶೀಲನೆಯಾಗಿದೆ. 2.28 ಅರ್ಜಿಗಳು ಅರ್ಹತೆ ಪಡೆದಿವೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, 27,486 ಅರ್ಜಿಗಳು ಸಲ್ಲಿಕೆಯಾಗಿವೆ.
ಸತತ ಆರು ತಿಂಗಳಿನಿಂದ ಪಡಿತರ ಪಡೆಯದ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಆದ್ಯತೆ ಅನುಸಾರ ಸೂಚಿಸಲಾಗಿದೆ. ಪಡಿತರ ಚೀಟಿಗಳನ್ನು ಪಡೆಯಲು ಅರ್ಹರಲ್ಲದವರೂ ಸಹ, ಚೀಟಿ ಪಡೆದ ಬಗ್ಗೆ ದೂರುಗಳಿವೆ. ಅಂತವರ ಕಾರ್ಡ್‌ಗಳನ್ನು ಪರಿಶೀಲಿಸಿ ರದ್ದುಪಡಿಸಲು ಆದೇಶಿಸಲಾಗಿದೆ.
ಪಡಿತರ ಚೀಟಿಗಳ ಆಧಾರದ ಮೇಲೆಯೇ ಗೃಹಲಕ್ಷ್ಮೀ, ಆಯುಷ್ಮಾನ್, ಆರೋಗ್ಯ ಚಿಕಿತ್ಸೆಯ ಐದು ಲಕ್ಷ ವೆಚ್ಚ, ವಿವಿಧ ಇಲಾಖೆ, ನಿಗಮಗಳ ಫಲಾನುಭವಿಗಳ ಆಯ್ಕೆ, ಸಲ ಸೌಲಭ್ಯ ನೀಡಲಾಗುತ್ತದೆ. ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಳವಾದರೆ ಸರ್ಕಾರಕ್ಕೂ ಹೊರೆಯಾಗುವ ಕಾರಣ ಪಡಿತರ ಕಾರ್ಡ್ ಗಳ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಆರು ತಿಂಗಳಿನಿಂದ ಪಡಿತರ ಪಡೆಯದ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.