- ಪೊಲೀಸರಿಂದ ಶುಕ್ರವಾರ 81 ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ
- ಅಂಗಡಿ ಮಾಲೀಕರಿಂದ ₹32,400 ದಂಡ ಸಂಗ್ರಹಿಸಿದ ಪೂರ್ವ ವಿಭಾಗದ ಪೊಲೀಸರು
ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದ 186 ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಿ ಎಂ ಲಕ್ಷ್ಮೀ ಪ್ರಸಾದ್ ಅವರ ಸೂಚನೆಯಂತೆ ದಾಳಿ ನಡೆಸಲಾಗಿದ್ದು, ತಂಬಾಕು ಉತ್ಪನ್ನಗಳ ಮಾರಾಟದ ಅಂಗಡಿಗಳ ವಿರುದ್ಧ ಪೊಲೀಸರು ವಿಶೇಷ ಅಭಿಯಾನ ನಡೆಸುತ್ತಿದ್ದಾರೆ. ಅದರಂತೆಯೇ ಇದೀಗ ನಗರದ ನಾನಾ ಭಾಗಗಳಲ್ಲಿ 186 ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ, 2003 (COTPA) ಅಡಿಯಲ್ಲಿ 242 ಪ್ರಕರಣಗಳನ್ನು ಪೋಲಿಸರು ದಾಖಲಿಸಿದ್ದು, ಅಂಗಡಿ ಮಾಲೀಕರ ವಿರುದ್ಧ 19 ಎಫ್‌ಐಆರ್ ದಾಖಲಿಸಲಾಗಿದೆ.
ನಗರದ ಈಶಾನ್ಯ ವಿಭಾಗದ ಪೊಲೀಸರು ಶುಕ್ರವಾರ 81 ಅಂಗಡಿಗಳ ಮೇಲೆ ದಾಳಿ ನಡೆಸಿದರು. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ ಅಡಿಯಲ್ಲಿ 72 ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಂಟು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ನ್ಯಾಯಾಲಯದಲ್ಲಿ ಹಣ ಪಾವತಿಸುವಂತೆ ಪೊಲೀಸರು ಅಂಗಡಿ ಮಾಲೀಕರಿಗೆ ತಿಳಿಸಿದ್ದಾರೆ.
ಪೂರ್ವ ಪೊಲೀಸ್ ಉಪ ಆಯುಕ್ತರಾದ ಭೀಮಾಶಂಕರ ಎಸ್ ಗುಳೇದ್ ಅವರ ನೇತೃತ್ವದಲ್ಲಿ ಪೂರ್ವ ವಿಭಾಗದ ಪೊಲೀಸರು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ವಿಶೇಷ ಆಂದೋಲನ ನಡೆಸಿ ತಂಬಾಕು ಉತ್ಪನ್ನಗಳು ಮತ್ತು ಮಾದಕ ವಸ್ತುಗಳ ಮಾರಾಟವನ್ನು ಪರಿಶೀಲಿಸಿದರು. ಶನಿವಾರ ತಡರಾತ್ರಿಯವರೆಗೆ 105 ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದ್ದು, ಎರಡು ಪ್ರಕರಣಗಳು ದಾಖಲಾಗಿವೆ. ಪೂರ್ವ ವಿಭಾಗದ ಪೊಲೀಸರು ಶನಿವಾರ ತಮ್ಮ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 170 ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ ಪ್ರಕರಣಗಳು ದಾಖಲಾಗಿವೆ. 11 ಎಫ್‌ಐಆರ್ ದಾಖಲಾಗಿವೆ. ಅಂಗಡಿ ಮಾಲೀಕರಿಂದ ₹32,400 ದಂಡವನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಿಂಗಳೊಳಗೆ ಉಳಿದ 19 ‘ನಮ್ಮ ಕ್ಲಿನಿಕ್’ ಆರಂಭ
“ತನಿಖಾ ತಂಡಗಳು ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲ ಅಂಗಡಿಗಳ ಮೇಲೆ ದಾಳಿ ನಡೆಸಿವೆ. ಸಿಗರೇಟ್ ಹಾಗೂ ಇನ್ನಿತರ ತಂಬಾಕು ಉತ್ಪನ್ನಗಳನ್ನು ಹೊಂದಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ವಶಪಡಿಸಿಕೊಂಡ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಈಶಾನ್ಯ ವಿಭಾಗದ ಪೊಲೀಸರು ಆಯಾ ವಿಭಾಗಗಳಲ್ಲಿ ದಾಳಿ ನಡೆಸಿದರು. ಪ್ರತಿ ಪೊಲೀಸ್ ಠಾಣೆಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ” ಎಂದು ಪ್ರಸಾದ್ ಮಾಹಿತಿ ನೀಡಿದರು.