ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ₹106 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ಸದ್ಯ ಸಿಬ್ಬಂದಿ ಕೊರತೆಯಿಂದ ನಿಷ್ಕ್ರಿಯವಾಗಿದೆ.
ಸದ್ಯ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ (ಓಪಿಡಿ) ಮಾತ್ರ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆ ಗೋವಿಂದರಾಜನಗರ ಕ್ಷೇತ್ರ ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ಎಂ.ಸಿ ಲೇಔಟ್‌ನಲ್ಲಿದೆ. ಈ ಹೈಟೆಕ್ ಆಸ್ಪತ್ರೆಗೆ ಆದಿಚುಂಚನಗಿರಿ ಪೀಠಾಧಿಪತಿ ಬಾಲಗಂಗಾಧರ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಂದು ಹೆಸರಿಡಲಾಗಿದೆ. ಫೆ.16ರಂದು ಅದಿಚುಂಚನಗಿರಿ ಶ್ರೀಗಳು ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದರು. 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು, ಎಲ್ಲ ಹೈಟೆಕ್ ಸೌಲಭ್ಯವಿದೆ. ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಆಸ್ಪತ್ರೆ ಇದಾಗಿದೆ.
ಆಸ್ಪತ್ರೆಯೂ ಲೋಕಾರ್ಪಣೆಯಾಗಿ 9 ತಿಂಗಳು ಕಳೆದಿವೆ. ಆದರೂ, ಈ ಆಸ್ಪತ್ರೆಯಿಂದ ಜನರಿಗೆ ಎಲ್ಲ ರೀತಿಯ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗೆ ಎಲ್ಲ ಉಪಕರಣ ಬಂದಿದ್ದರು, ವೈದ್ಯರ, ದಾದಿಯರ, ಸಿಬ್ಬಂದಿಗಳ ಕೊರತೆ ಎದುರಾಗಿದೆ.
ಕೋಟಿ ಕೋಟಿ ಖರ್ಚು ಮಾಡಿ, ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿದರೂ ಜನರಿಗೆ ಉಪಯೋಗಕ್ಕೆ ಸಿಗುತ್ತಿಲ್ಲ ಎಂದು ಗೋವಿಂದರಾಜನಗರದ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯಕ್ಕೆ, ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ(ಓಪಿಡಿ) ಮಾತ್ರ ಕಾರ್ಯನಿರ್ವಹಿಸುತ್ತಿದೆ. ಈಗ ಇರುವ ಸೌಲಭ್ಯವನ್ನು ಬಿಟ್ಟು, ಇನ್ನು ಆಸ್ಪತ್ರೆಗೆ 300 ಹಾಸಿಗೆಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಆದರೆ, ಇನ್ನೂ ಆಸ್ಪತ್ರೆಯ ಬಹುತೇಕ ಹಾಸಿಗೆಗಳು ಖಾಲಿಯಾಗಿಯೇ ಉಳಿದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ (ಆರೋಗ್ಯ) ಡಾ ಕೆ ವಿ ತ್ರಿಲೋಕ್ ಚಂದ್ರ ಮಾತನಾಡಿ, “ಸದ್ಯ ವೈದ್ಯರ ಕೊರತೆ ಇದೆ. ಆಸ್ಪತ್ರೆಗೆ 17 ವಿಶೇಷ ವೈದ್ಯರ ನಿಯೋಜನೆಗೆ ವಿನಂತಿಸಲಾಗಿದೆ. ಆಸ್ಪತ್ರೆಯಲ್ಲಿ ಓಪಿಡಿ ಸೇವೆ ನಿರ್ವಹಿಸುತ್ತಿದೆ. ಆಸ್ಪತ್ರೆಯು ಎಲ್ಲ ಅಗತ್ಯ ಮೂಲಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ನಾವು ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ಬೆಂಬಲವನ್ನು ಕೋರಿದ್ದೇವೆ” ಎಂದರು.
ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರು ಮಾತನಾಡಿ, “ವೈದ್ಯರು ಹಾಗೂ ಅಗತ್ಯ ಔಷಧಿಗಳ ಕೊರತೆಯಿದೆ. ಇದರಿಂದ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಆಸ್ಪತ್ರೆ ಪ್ರೇತ ಕಟ್ಟಡವಾಗಿ ಮಾರ್ಪಾಡಾಗಿದೆ. ಆಸ್ಪತ್ರೆಯ ವಾರ್ಷಿಕ ನಿರ್ವಹಣಾ ವೆಚ್ಚ ₹48 ಕೋಟಿ ಇದೆ ಎಂದು ಬಿಬಿಎಂಪಿ ಅಂದಾಜಿಸಿದೆ. ಹಾಗಾಗಿ, ಆರೋಗ್ಯ ಇಲಾಖೆಯು ಅದರ ಜವಾಬ್ದಾರಿಯನ್ನು ತೆಗೆದುಕ್ಕೊಳ್ಳಬೇಕು. ಈ ಆಸ್ಪತ್ರೆಯು ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗಳಂತೆ ಜನರಿಗೆ ಸಮೀಪದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವಂತಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೋಷಕರ ಮೇಲೆ ದ್ವೇಷ; ಬಾಲಕಿ ಮೇಲೆ ನಾಯಿ ಛೂ ಬಿಟ್ಟ ದುರುಳ
ಪ್ರಯೋಗಾಲಯಗಳು, ರೇಡಿಯಾಲಜಿ, ರಕ್ತ ಸಂಗ್ರಹಣೆ, ತುರ್ತು ವಿಭಾಗ, ಫಾರ್ಮಸಿ, ಮೈನರ್ ಆಪರೇಷನ್ ಥಿಯೇಟರ್‌ಗಳು, ಹೆರಿಗೆ, ಮಕ್ಕಳ ಆರೈಕೆ, ಕೀಮೋಥೆರಪಿ, ಮೂಳೆಚಿಕಿತ್ಸೆ, ದಂತ ಸೇವೆಗಳು, ನೇತ್ರವಿಜ್ಞಾನ ಮತ್ತು ಸಾಮಾನ್ಯ ವಾರ್ಡ್ ಸೌಲಭ್ಯಗಳು ಸೇರಿದಂತೆ ಅಗತ್ಯ ಸೇವೆಗಳ ಶ್ರೇಣಿಯನ್ನು ಆಯೋಜಿಸಲು ಈ ಆಸ್ಪತ್ರೆಯನ್ನು ವಿನ್ಯಾಸಗೊಳಿಸಲಾಗಿದೆ.