ಬಂಜಾರ ಸಂಸ್ಕೃತಿ ಮತ್ತು ಕಲೆಗೆ ರಾಷ್ಟ್ರಮಟ್ಟದಲ್ಲಿ ಮಹತ್ವವಿದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ ಹೇಳಿದರು.
ʼಪ್ರದರ್ಶನ ಕಲೆಗಳಲ್ಲಿ ಬಂಜಾರ ಸಂಸ್ಕೃತಿʼ ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಮಾತನಾಡಿ, “ಬಂಜಾರ ಪರಂಪರೆಯಿಂದ ಬಂದ ಬಂಜಾರ ನೃತ್ಯ ಕಲಾವಿದೆ ಮೈಸೂರು ಸಂಸ್ಥಾನದ ವಿದುಷಿ ಪದ್ಮಭೂಷಣ ಡಾ.ವೆಂಕಟಲಕ್ಷಮ್ಮ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಶಿಷ್ಟ ಮೈಸೂರು ಶೈಲಿಯ ನೃತ್ಯವನ್ನು ಬೆಳೆಸಿದರು. ಇವರ ಬಗ್ಗೆ ವಿಚಾರ ಸಂಕಿರಣ ನಡೆದಿರುವುದು ಹೆಮ್ಮೆಯ ಸಂಗತಿ” ಎಂದು ಸ್ಮರಿಸಿದರು.
“ಬಂಜಾರ ಕಲೆ ದೇಶಕ್ಕೆ ಆತ್ಮವಿದ್ದಂತೆ. ಇವುಗಳಲ್ಲಿ ಚತುರ್ವಿಧ ಅಭಿನಯವಿದೆ. ಭರತನಾಟ್ಯ ಶಾಸ್ತ್ರದಲ್ಲಿ ಹೇಳುವ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಅಭಿನಯವೂ ಒಳಗೊಂಡ ಸಂಪೂರ್ಣ ರಂಗಭೂಮಿಯೇ ಇದೆ. ಇವುಗಳನ್ನು ಸಂಶೋಧಕರು ಪರಿಶೀಲಿಸಿ ಮೂಲಕ್ಕೆ ಧಕ್ಕೆ ಬಾರದಂತೆ ಪರಿಷ್ಕರಣೆ ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬೇಕಾಗಿದೆ” ಎಂದರು.

ಹಿ ಚಿ ಬೋರಲಿಂಗಯ್ಯ ಮಾತನಾಡಿ, “ಬಂಜಾರರ ಕೌಶಲ್ಯಗಳ ಅಭಿವೃದ್ಧಿಯಾಗಬೇಕು. ಅವರ ಕಲೆ, ಸಾಹಿತ್ಯ, ಭಾಷೆ ದಾಖಲಾಗಬೇಕು. ಬಂಜಾರ ನೃತ್ಯ, ಹಾಡು ಆಕರ್ಷಣೀಯವಾಗಿದ್ದು, ಎಲ್ಲರಿಗೂ ಕಲಿಸಬೇಕು. ಇವರ ವಸ್ತ್ರ ಕಡಿಮೆ ಬೆಲೆಗೆ ಸಿಗಬೇಕು” ಎಂದರು.
ಡಾ. ಲಲಿತಾ ಶ್ರೀನಿವಾಸ್ ಮಾತನಾಡಿ, “ಡಾ.ವೆಂಕಟಲಕ್ಷ್ಮಮ್ಮ ನನ್ನ ಗುರುಗಳಾಗಿದ್ದುಕೊಂಡು ನೃತ್ಯ ಕಲಿಸಿದವರು. ಇವರು ಕಮಲಾದೇವಿ ಚಟ್ಟೋಪಾಧ್ಯಾಯರ ಆಪ್ತರಾಗಿದ್ದರು. ಬಂಜಾರ ಸಮುದಾಯದ ಸುಂದರ ಹುಡುಗಿ, ಅಂದು ಗುರುಕುಲ ಪದ್ಧತಿಯಲ್ಲಿ ನೃತ್ಯವನ್ನು ಕಲಿತವರು. ಇವರಿಗೆ ಅದ್ಭುತವಾದ ಪ್ರತಿಭೆ, ಪಾಂಡಿತ್ಯವಿತ್ತು. ಕಣ್ಣಿನ ನೋಟ, ದೇಹಸಿರಿ, ಸೌಂದರ್ಯದ ಜೊತೆಗೆ ತೆಲಗು, ಸಂಸ್ಕೃತ ಪಾಂಡಿತ್ಯವಿತ್ತು. ನಮ್ಮ ಅತ್ತೆ ಸಂಪ್ರದಾಯಸ್ತರಾದರೂ ಬಂಜಾರ ಜನಾಂಗದ ಈ ಗುರುಗಳನ್ನು ನನ್ನ ಮನೆಯಲ್ಲಿಟ್ಟು ಉಪಚರಿಸುತ್ತಿದ್ದೆ” ಎಂದರು.
ಚಿತ್ತಯ್ಯ ಪೂಜಾರ್ ಮಾತನಾಡಿ, “ಬಹು ಸಂಸ್ಕೃತಿಯಲ್ಲಿ ಏಕಮುಖ ಸಂಸ್ಕೃತಿ ಆಲೋಚನೆಯಲ್ಲಿ ಬಂಜಾರ ಬುಡಕಟ್ಟು ವಿಶಿಷ್ಟ ಎನಿಸಿದೆ. ಇವರ ಸಂಸ್ಕೃತಿಯ ಮೂಲದ ಭಾವ, ನೋವು ಅರಿಯಬೇಕು” ಎಂದರು.
ಸಿ.ಬಸವಲಿಂಗಯ್ಯ ಮಾತನಾಡಿ, “ಡಾ ವೆಂಕಟಲಕ್ಷ್ಮಮ್ಮ ಅವರ ಗುರು ಜಟ್ಟಿ ತಾಯಮ್ಮ, ಗಂಗೂಬಾಯಿ ಮೂಲತಃ ದೇವದಾಸಿ ಪದ್ದತಿಯಿಂದ ಬಂದ ಪ್ರತಿಭೆಗಳು. ಬಂಜಾರರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಸಂಸ್ಕೃತಿ, ಭಾಷೆ ಆಚಾರವುಳ್ಳವರು. ಇವರ ಮೂಲ ಪುರುಷ ದಾದಾಮೋಲ ಹಾಗೂ ಕೃಷ್ಣನಿಗೆ ಸಂಬಂಧವಿದೆ. ಕೃಷ್ಣ ಕೊಳಲು ಪಡೆದದ್ದು, ಬಂಜಾರ ದಾದಾಮೋಲ ಅವರ ಪ್ರದರ್ಶನ ಕಲೆ ಸಮಾಜಮುಖಿ ದೃಷ್ಟಿ ಹೊಂದಿದೆ. ಇಂದು ಎಲ್ಲ ಜಾತಿಗಳು ಜ್ಯೋತಿಗಳಾಗಿ ಸ್ವಸ್ಥ ಸಮಾಜ ನಿರ್ಮಿಸಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪತ್ರಿಕಾ ವಿತರಕರ ಸಂಘಟನೆಯ ಹೋರಾಟಕ್ಕೆ ಸರ್ಕಾರ ಸ್ಪಂದನೆ: ರಾಜ್ಯಾಧ್ಯಕ್ಷ ಶಂಭುಲಿಂಗ
ಸಮಾರಂಭದಲ್ಲಿ ಶಿವಮೊಗ್ಗದ ಬಂಜಾರ ಕಲಾವಿದರ ನೃತ್ಯ ಆಕರ್ಷಿಸಿತು. ಸಂಪನ್ಮೂಲ ವ್ಯಕ್ತಿಗಳಾಗಿ ಜಾನಪದ ತಜ್ಞ ಹಿ ಚಿ ಬೋರಲಿಂಗಯ್ಯ, ರಂಗ ನಿರ್ದೇಶಕ ಸಿ ಬಸವಲಿಂಗಯ್ಯ, ಪ್ರೊ. ಚಿತ್ತಯ್ಯ ಪೂಜಾರ್, ಮುಖ್ಯಸ್ಥ ಡಾ. ರಾಮಕೃಷ್ಣಯ್ಯ, ಡಾ. ಲಲಿತಾ ಶ್ರೀನಿವಾಸನ್, ಬಂಜಾರ ಕಲಾವಿದರಾದ ಶಶಿಕಲಾಬಾಯಿ ಹಾಗೂ ಅಕಾಡೆಮಿ ಸದಸ್ಯರು ಇದ್ದರು.