ನಕಲಿ ದಾಖಲೆ ಪಡೆದು ಲಕ್ಷಾಂತರ ರೂಪಾಯಿ ಸಾಲ ಮಂಜೂರಾತಿ ಮಾಡಿದ್ದ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೇರಿ ಐವರಿಗೆ ₹62.30ಲಕ್ಷ ದಂಡ ಜತೆಗೆ, 5 ವರ್ಷ ಕಠಿಣ ಕಾರಾಗೃಹ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರಿನ ಜಾಲಹಳ್ಳಿ ಶಾಖೆಯ ಸಿಂಡಿಕೇಟ್ ಬ್ಯಾಂಕ್‌ಗೆ ವಂಚನೆ ಎಸಗಿದ ಐವರಿಗೆ ಸಿಬಿಐ ವಿಶೇಷ ನ್ಯಾಯಾಲಯವು ದಂಡ ಮತ್ತು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ₹61 ಲಕ್ಷ ಹಣವನ್ನು ಪರಿಹಾರವಾಗಿ ಜಾಲಹಳ್ಳಿ ಶಾಖೆಯ ಸಿಂಡಿಕೇಟ್ ಬ್ಯಾಂಕ್‌ಗೆ (ಈಗ ಪಂಜಾಬ್ ನ್ಯಾಷನಲ್ ಬ್ಯಾಂಕ್) ಪರಿಹಾರವಾಗಿ ಪಾವತಿಸಬೇಕು ಮತ್ತು ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕ್‌ನ ಜಾಲಹಳ್ಳಿ ಶಾಖೆಯ ಅಂದಿನ ಹಿರಿಯ ವ್ಯವಸ್ಥಾಪಕ ಎನ್ ಸತ್ಯಬಾಬು, ಎಸ್ ಭಾರತಿ, ಎಚ್ ನಳಿನಾಕ್ಷಿ, ಎಸ್ ರಮೇಶ್ ಹಾಗೂ ಪ್ರಿನ್ಸ್ ನೇಶನ್ ಶಿಕ್ಷೆಗೊಳಗಾದವರು.
ಒಟ್ಟು ₹62.30 ಲಕ್ಷ ದಂಡದ ಪೈಕಿ ಸತ್ಯಬಾಬು ₹15.95 ಲಕ್ಷ, ಭಾರತಿ, ನಳಿನಾಕ್ಷಿ, ರಮೇಶ್ ತಲಾ ₹13.70 ಲಕ್ಷ, ರಾಜಕುಮಾರ್ ನೇಶನ್ ₹5.25 ಲಕ್ಷ ಈ ಐವರು ಸೇರಿ ಬ್ಯಾಂಕ್‌ಗೆ ಹಣ ಪಾವತಿಸಬೇಕಿದೆ.
“ನ್ಯಾಯಲಯದ ಮುಂದೆ ಹಾಜರುಪಡಿಸಿದ ಮಾಹಿತಿಯನ್ನು ಪರಿಗಣಿಸಿ, ಆರೋಪಿಯ ಕೃತ್ಯವನ್ನು ಆರ್ಥಿಕ ಅಪರಾಧವೆಂದು ಪರಿಗಣಿಸಬಹುದು. ಇದು ಆರ್‌ಬಿಐ ಮತ್ತು ಬ್ಯಾಂಕ್ ರೂಪಿಸಿರುವ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ನ್ಯಾಯಾಧೀಶರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಮಾನ ನಿಲ್ದಾಣದಲ್ಲಿ ಸುಮಾರು ₹1 ಕೋಟಿ ಮೌಲ್ಯದ ಚಿನ್ನಾಭರಣ ವಶ
ಏನಿದು ಪ್ರಕರಣ?
2016ರ ಬ್ಯಾಂಕ್‌ನ ಹಿಂದಿನ ಹಿರಿಯ ವ್ಯವಸ್ಥಾಪಕ ಸತ್ಯಬಾಬು, ಇತರರೊಂದಿಗೆ ಸೇರಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಕಲಿ ದಾಖಲೆ ಪಡೆದು ಸಾಲ ಮಂಜೂರು ಮಾಡಿದ್ದರು. ಮೊದಲಿಗೆ ನಕಲಿ ದಾಖಲೆ ಪಡೆದು ₹25.80 ಲಕ್ಷ ಸಾಲ ಮಂಜೂರು ಮಾಡಿದ್ದು, ನಳಿನಾಕ್ಷಿ ಅವರಿಗೆ ಸೇರಿದ ಮಹಾಲಕ್ಷ್ಮಿ ಗ್ರಾನೈಟ್ಸ್ ಗೆ ₹20 ಲಕ್ಷ ಹಾಗೂ ಮಂಜುನಾಥ ಎಂಜಿನಿಯರಿಂಗ್ ವರ್ಕ್ಸ್ ಮಾಲೀಕರಾಗಿದ್ದ ಭಾರತಿ ಅವರಿಗೆ ₹20 ಲಕ್ಷ ಸಾಲ ಮಂಜೂರು ಮಾಡಿದ್ದಾರೆ.
2014-15ರಲ್ಲಿ M/s ಡಿಜೆ ಮ್ಯಾಕ್ಸ್ ಇಂಜಿನಿಯರಿಂಗ್ ಸಿಸ್ಟಂನ ಮಾಲೀಕ ರಮೇಶ್ ಅವರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಮ್‌ಎಸ್‌ಎಮ್‌ಇ) ಯೋಜನೆಯಡಿಯಲ್ಲಿ ಯಂತ್ರೋಪಕರಣಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಆದರೆ, ಅಸಲಿಗೆ ಈ ಘಟಕಗಳು ಅಸ್ತಿತ್ವದಲ್ಲೇ ಇರಲಿಲ್ಲ. ಆದರೆ, ಸತ್ಯಬಾಬು ಅವರು ಘಟಕಗಳು ಅಸ್ತಿತ್ವದಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮಂಜೂರಾತಿ ಪೂರ್ವ ಮತ್ತು ನಂತರ ಭೇಟಿ ನೀಡದೆ ಸಾಲದ ಮೊತ್ತವನ್ನು ವಿತರಿಸಿದ್ದರು.
ಅಕ್ರಮ ಬೆಳಕಿಗೆ ಬಂದು ಸತ್ಯಬಾಬು ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು. ನಕಲಿ ದಾಖಲೆ ಪಡೆದು ಸಾಲ ಮಂಜೂರು ಮಾಡಿ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದರ ಮೇರೆಗೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಪ್ರತ್ಯೇಕ ಎರಡು ಆರೋಪಪಟ್ಟಿಯನ್ನು ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದರು.