ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟಗಾರರು ಮತ್ತು ವ್ಯಸನಿಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ಬೃಹತ್ ಡ್ರಗ್ಸ್ ಜಾಲ ಪತ್ತೆ ಹಚ್ಚಿದ್ದಾರೆ. 8 ಮಂದಿ ವಿದೇಶಿಗರು ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ ₹5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ 15 ದಿನಗಳಲ್ಲಿ ಕಾಡುಗೋಡಿ, ಕೆ.ಆರ್.ಪುರಂ, ಸೋಲದೇವನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ವೈಟ್ಫೀಲ್ಡ್, ಬಾಣಸವಾಡಿ, ಪರಪ್ಪನ ಅಗ್ರಹಾರ ಸೇರಿದಂತೆ ನಾನಾ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.
ದಾಳಿ ವೇಳೆ ಸುಮಾರು ₹5 ಕೋಟಿ ಮೌಲ್ಯದ 3 ಕೆ.ಜಿ. 806 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, 50 ಗ್ರಾಂ ಕೊಕೇ ನ್, 25 ಎಕ್ಸ್ಟಸಿ ಪಿಲ್ಸ್, 5 ಕ್ವಿಂಟಲ್ ಗಾಂಜಾ, 1 ಕಾರು, ಮೂರು ದ್ವಿಚಕ್ರ ವಾಹನ ಹಾಗೂ 9 ಮೊಬೈಲ್ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ಬಂಧಿತರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ” ಎಂದು ಮಾದಕ ವಸ್ತು ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಲಿ ಉಗುರು | ಕಳಸದ ಡಿಆರ್‌ಎಫ್‍ಓ ದರ್ಶನ್ ಅಮಾನತು
ವ್ಯವಹಾರಿಕ ವೀಸಾ ಪಡೆದು ನೈಜೀರಿಯಾ, ಇಥಿಯೋಪಿಯಾ ಸೇರಿ ನಾನಾ ದೇಶಗಳ 8 ಮಂದಿ ಡ್ರಗ್ಸ್ ಪೆಡ್ಲರ್ಗಳು ಬೆಂಗಳೂರಿಗೆ ಬಂದಿದ್ದರು. ಆರೋಪಿಗಳು ಕಡಿಮೆ ಸಮಯದಲ್ಲಿ ಸುಲಭವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಗೋವಾ, ಕೇರಳ, ದೆಹಲಿ ಸೇರಿ ದೇಶದ ನಾನಾ ಕಡೆಯಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ಅವುಗಳನ್ನು ದುಬಾರಿ ದರಕ್ಕೆ ಕಾಲೇಜು ವಿದ್ಯಾರ್ಥಿಗಳು, ಐಟಿ–ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.