ಅಲೆಮಾರಿ ಸಮುದಾಯಗಳ ಗಟ್ಟಿಧ್ವನಿ, ಸಾಹಿತಿ, ಒಬಿಸಿ ಆಯೋಗದ ಮಾಜಿ ಅಧ್ಯಕ್ಷ, ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ, ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಡಾ. ಸಿ ಎಸ್ ದ್ವಾರಕನಾಥ್ ಅವರನ್ನು ವಿಧಾನ ಪರಿಷತ್‌ನ ತೆರವಾದ ನಾಲ್ಕು ಸ್ಥಾನಗಳಲ್ಲಿ, ಒಂದು ಸದಸ್ಯ ಸ್ಥಾನಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷ ನಾಮನಿರ್ದೇಶನಗೊಳಿಸಬೇಕು. ಈ ಮೂಲಕ ಕಾಂಗ್ರೆಸ್ ಅಲೆಮಾರಿಗಳ ರಾಜಕೀಯ ಅಸ್ಮಿತೆಗಾಗಿ ಮೇಲ್ಮನೆಯ ಮೂಲಕ ರಾಜಕೀಯದ ಪ್ರಾತಿನಿಧ್ಯದ ಅರಿವು ನೀಡಿದ್ದೇವೆಂದು ಹಮ್ಮಿನಿಂದ ಬೀಗಿಕೊಳ್ಳಲಿ ಎಂದು ಬರಹಗಾರ, ಯುವ ವಕೀಲ ಶಿವರಾಜ್ ಮೋತಿ ಅಭಿಪ್ರಾಯಪಟ್ಟರು.
ಸಿ ಎಸ್ ದ್ವಾರಕಾನಾಥ್ ಅವರು ಕಳೆದ ನಲವತ್ತು ವರ್ಷಗಳಿಂದ ಜನಪರ ಸಂಘಟನೆಗಳು, ಚಳವಳಿಗಳ ಜತೆಗೆ ಈ ನೆಲದ ಸಂಕಟಗಳ ಬಗ್ಗೆ ನಿರ್ಗತಿಕ, ತಬ್ಬಲಿ ಅಲೆಮಾರಿಗಳ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದು, ʼಅಲೆಮರಿಗಳೂ ಈ ದೇಶದ ಪ್ರಜೆಗಳು ಪಶುಗಳಲ್ಲʼವೆಂದು ಚಿಂತಿಸಿ ಸದಾ ಬರಹಗಳ ಮೂಲಕ ಹಾಗೂ ಸಂವಹನಗಳ ಮೂಲಕ ಅಲೆಮಾರಿಗಳ ವಿಷಯವನ್ನು ಮುನ್ನಲಗೆ ತರುತ್ತಲೇ ಇರುತ್ತಾರೆ. ಸ್ವತಃ ಹಿಂದುಳಿದ ಬಲಿಜ(ಕಮ್ಮ) ಜನಾಂಗಕ್ಕೆ ಸೇರಿದವರಾದರೂ ನಿಷ್ಠುರತೆಯ ಇವರು ಕೋಲಾರದವರು. ಅಲೆಮಾರಿಗಳಿಗೆ ಗುರುತು ಕೊಟ್ಟ, “ದ್ವಾರಕನಾಥ್ ಮೊದಲು ಕೋಲಾರದಲ್ಲಿ ಅಹಿಂದ ಸಂಘಟನೆ ಮಾಡಿದ್ದು, ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾಗಿ ಸ್ವತಃ ಇಂದಿನ ಮುಖ್ಯಮಂತ್ರಿಳೇ ಸದನದಲ್ಲಿ ಹೇಳಿರುವುದ ಗಮನಾರ್ಹ.
ಲಂಕೇಶ್ ಪತ್ರಿಕೆಯಲ್ಲಿದ್ದಾಗ ಇಪ್ಪತ್ತು ವರ್ಷಗಳ ಕಾಲ ಕಾಂಗ್ರೆಸ್‌ನ ಕಡು ಟೀಕಾಕಾರ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಮೂರು ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆಯಾಗಿ, ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯಾದ್ಯಂತ ಟೊಂಕಕಟ್ಟಿ ಸುತ್ತಿ ಅಲೆಮಾರಿ, ಬುಡಕಟ್ಟು, ಆದಿವಾಸಿ ಒಟ್ಟಾರೆ ಅಲ್ಲಲ್ಲಿ ಸಣ್ಣಸಣ್ಣದಾಗಿ ಛಿದ್ರವಾಗಿ ಒಡೆದುಹೋಗಿರುವ ನಿರ್ಗತಿಕ ಅಲೆಮಾರಿಗಳ ಕೇರಿಗೆ ತೆರಳಿ ಅವರ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಶ್ರಮ ಹಾಕಿ ಅತ್ಯಂತ ಯಶಸ್ವಿಯಾಗಿದ್ದಾರೆಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ.
ಯಾವುದೇ ವಿಷಯದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ, ಲಂಕೇಶ್ ಪತ್ರಿಕೆಯ ಛಾಪನ್ನು ಇಂದಿಗೂ ಯುವ ಸಮುದಾಯಕ್ಕೆ ಪರಿಚಯಿಸುತ್ತಿರುವ ಸಾಲಿನಲ್ಲಿ ಇವರೂ ಒಬ್ಬರು. ಸಾಮಾಜಿಕ ನ್ಯಾಯದ ಪರ ಧೃಡವಾಗಿ ನಿಂತಿರುವ, ಮಾತನಾಡುವ ತಳ ಸಮುದಾಯಗಳ ಮುನ್ನೆಲೆಗಾಗಿ ಶ್ರಮಪಟ್ಟ ಧೀಮಂತ ನಾಯಕ ಅಷ್ಟೇ ಅಲ್ಲ, ಅಲೆಮಾರಿಗಳ ಪರವಾದ ಚಳವಳಿಗಾರರೂ ಆಗಿದ್ದಾರೆ. ಸವಲತ್ತು ಒದಗಿಸಲು ಅಧಿಕಾರಿಗಳ ಮೊರೆ ಹೋಗಲು ಅನಿವಾರ್ಯ ಎಂದರಿತು “ಕರ್ನಾಟಕ ರಾಜ್ಯ ಅಲೆಮಾರಿ, ಬುಡಕಟ್ಟು ಮಹಾಸಭಾ” ಸ್ಥಾಪಿಸಿ ಅದರ ಮೂಲಕ ಇಡೀ ರಾಜ್ಯಾದ್ಯಾಂತ ರಚನಾತ್ಮಕವಾಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅತ್ಯಂತ ಕಟ್ಟಕಡೆಯ ಸಮುದಾಯಗಳ ಪಾಲಿನ ಪೋಷಕರೆಂದು ಇವರನ್ನು ಪ್ರಗತಿಶೀಲ ಚಳವಳಿಕಾರರೂ ಕೂಡಾ ಬಣ್ಣಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಎಸ್‌ಯುಸಿಐ ಆಗ್ರಹ
ಈ ರಾಜ್ಯದಲ್ಲಿ ಧ್ವನಿಯೇ ಇಲ್ಲದ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಶೋಷಿತ ವರ್ಗದ ಪರವಾಗಿ ದೊಡ್ಡ ಪ್ರಮಾಣದ ಧ್ವನಿಯಾಗಿ ನಿಲ್ಲುತ್ತಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಇಂತಹ ಮಹನೀಯರಿಗೆ ಸೂಕ್ತ ಸ್ಥಾನಮಾನ ನೀಡಿ ಗೌರವಿಸುವುದು, ಪ್ರಾತಿನಿಧ್ಯ ಒದಗಿಸುವುದು ಅನಿವಾರ್ಯ. ಹಾಗಾಗಿ ಸಿ ಎಸ್ ದ್ವಾರಕನಾಥ್ ಅವರಿಗೆ ಪಕ್ಷದಲ್ಲಿ ವಿಶೇಷ, ಉನ್ನತವಾದ ವಿಧಾನ ಪರಿಷತ್(ಎಂಎಲ್‌ಸಿ) ಸದಸ್ಯರನ್ನಾಗಿ ಮಾಡಬೇಕೆಂದು ಈ ಮೂಲಕ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಲ್ಲಿ ಪ್ರಜ್ಞಾವಂತ, ಪ್ರಗತಿಶೀಲ ಅಲೆಮಾರಿ ಯುವಕನಾಗಿ ಮನವಿ ಮಾಡುವುದು ನನ್ನ ಕರ್ತವ್ಯ ಎಂದು ಶಿವರಾಜ್ ಮೋತಿ ಹೇಳಿದರು.