ಯಲಹಂಕದ ಕೇಂದ್ರೀಯ ವಿಹಾರ ಬಹು ಮಹಡಿ ಕಟ್ಟಡಗಳ ಸಂಕೀರ್ಣದಲ್ಲಿ ವಾಸ ಮಾಡುತ್ತಿರುವ ಡಾ. ಸುನಿಲ್ ಕುಮಾರ್ ಹೆಬ್ಬಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಘಟನೆಗೆ ಸಂಬಂಧಿಸಿದಂತೆ ನೈಜ ಹೋರಾಟಗಾರರ ವೇದಿಕೆ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, “ಡಾ. ಸುನಿಲ್ ಕುಮಾರ್ ಹೆಬ್ಬಿ ಅವರು ಬಡವರ, ದೀನ ದುರ್ಬಲರ ವೈದ್ಯಕೀಯ ಸೇವೆಯನ್ನು ಉಚಿತವಾಗಿ ಮಾಡುತ್ತಾ ಬಂದಿದ್ದಾರೆ. ಬಹಳ ಮುಖ್ಯವಾಗಿ ಕೋವಿಡ್-19 ಸಮಯದಲ್ಲಿ ಇಡೀ ದೇಶವೇ ತಲ್ಲಣವಾದ ಸಂದರ್ಭದಲ್ಲಿ ಮತ್ತು ಲಾಕ್‌ಡೌನ್ ಆದ ಸಂದರ್ಭದಲ್ಲಿ ಮೊಬೈಲ್ ಕ್ಲಿನಿಕ್ ಮುಖಾಂತರ ಸ್ಲಂಗಳಿಗೆ ತೆರಳಿ ಬಡವರಿಗೆ ಚಿಕಿತ್ಸೆ ನೀಡಿದ್ದರು. ಇವರು ಮೊಬೈಲ್ ಡಾಕ್ಟರ್ ಎಂದೇ ಖ್ಯಾತಿ ಪಡೆದಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಡಾ. ಸುನಿಲ್ ಕುಮಾರ್ ಹೆಬ್ಬಿ ಅವರು ವಾಸವಿರುವ ಕೇಂದ್ರೀಯ ವಿಹಾರದ ಅಪಾರ್ಟ್‌ಮೆಂಟ್ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸೊಸೈಟಿ ಆಫ್ ರಿಜಿಸ್ಟರ್ ಅವರಿಗೆ ದೂರು ನೀಡಿದ್ದರು. ಹಾಗೆಯೇ ಅಲ್ಲಿನ ಅವ್ಯವಹಾರವನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ಬಯಲಿಗೆಳೆದು, ಅವರ ಬ್ಯಾಂಕ್ ಅಕೌಂಟ್‌ಗಳನ್ನು ಸೀಜ್ ಮಾಡಿಸಿದ್ದರು ಹಾಗೂ ನೋಟಿಸ್ ಕೂಡ ಕೊಡಿಸಿದ್ದರೆಂದು ಹೇಳಲಾಗುತ್ತಿದೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ಈ ಕಾರಣಕ್ಕಾಗಿ ಅವರ ಮೇಲೆ ಕಾರ್ ಪಾರ್ಕಿಂಗ್ ವಿಷಯವನ್ನು ತೆಗೆದು ಸುನಿಲ್ ಯಾದವ್ ಮತ್ತು ಅವರ ಗುಂಪು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿರುವ ಸಾಮಾಜಿಕ ಹೋರಾಟಗಾರರು ಮಲ್ಲೇಶ್ವರಂ ನಗರದ ಕೆ ಸಿ ಜನರಲ್ ಆಸ್ಪತ್ರೆಗೆ ಧಾವಿಸಿ ಅವರ ಆರೋಗ್ಯವನ್ನು ವಿಚಾರಿಸುವಂತೆ ನಮ್ಮ ಗಮನಕ್ಕೆ ತಂದಿದ್ದರು” ಎಂದಿದ್ದಾರೆ.
“ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ಸುನಿಲ್ ಕುಮಾರ್ ಹೆಬ್ಬಿ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿ ಕೆಲವು ಭ್ರಷ್ಟಾಚಾರವನ್ನು ಕೂಡ ಬಯಲು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಾಕ್ಟರ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ದೂರಿನನ್ವಯ ಯಲಹಂಕ ಪೊಲೀಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಆದರೆ ಬಹಳ ಮುಖ್ಯವಾಗಿ ಕೊಲೆ ಪ್ರಯತ್ನವಾಗಿದ್ದರೂ ಸೆಕ್ಷನ್ 307ರ ಅಡಿ ಎಫ್‌ಐಆರ್ ದಾಖಲು ಮಾಡದೆ ಕರ್ತವ್ಯ ಲೋಪ ಮಾಡಿದ್ದಾರೆ. ಇದೊಂದು ಕೊಲೆ ಮಾಡುವ ಪ್ರಯತ್ನವೆಂದು ಸ್ಪಷ್ಟವಾಗಿ ಗೋಚರಿಸಿದರೂ ಕೂಡಾ ಪೊಲೀಸರು ಸೆಕ್ಷನ್ 307 ಹಾಕದಿರುವುದು ಅನುಮಾನಕ್ಕೆ ಎಡೆಮಾಡಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದು ಖಚಿತ: ಡಾ. ಆರತಿ ಕೃಷ್ಣ
“ಪೋಲಿಸ್ ಆಯುಕ್ತರಾದ ತಾವು ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಡಾಕ್ಟರ್ ಸುನಿಲ್ ಕುಮಾರ ಹೆಬ್ಬಿ ಅವರಿಗೆ ಕೂಡಲೇ ಪೊಲೀಸ್ ರಕ್ಷಣೆ ಒದಗಿಸಬೇಕು” ಎಂದು ನೈಜ ಹೋರಾಟಗಾರರ ವೇದಿಕೆಯು ಆಗ್ರಹಿಸಿದೆ.
ನೈಜ ಹೋರಾಟಗಾರರ ವೇದಿಕೆಯ ಪರವಾಗಿ ಎಚ್ ಎಂ ವೆಂಕಟೇಶ್, ಟಿ ನರಸಿಂಹಮೂರ್ತಿ, ಕುಣಿಗಲ್ ನರಸಿಂಹಮೂರ್ತಿ, ಎಲ್ ಎಸ್ ಮಲ್ಲಿಕಾರ್ಜುನ್ ಇದ್ದರು.
