ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಜನರ ಬದುಕನ್ನು ಕಟ್ಟುವುದರೊಂದಿಗೆ ಶಾಂತಿ, ಸಾಮರಸ್ಯದಿಂದ ಸುಭದ್ರ ಆಡಳಿತ ನೀಡಿದ ಕಾಂಗ್ರೆಸ್‌ನ ಕೈ ಹಿಡಿಯಲಿದ್ದಾರೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿಯ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳು, ನಗರಸಭಾ ಸದಸ್ಯರು ಹಾಗೂ ನಗರಸಭೆಗೆ ಸ್ಪರ್ಧಿಸಿದ ಪಕ್ಷದ ಮುಂದಾಳುಗಳಿಗಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
“ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಅನಿವಾಸಿ ಭಾರತೀಯರ ಕುಂದುಕೊರತೆಗಳ ಪರಿಹಾರಕ್ಕಾಗಿ ಪ್ರತ್ಯೇಕ ಸಚಿವಾಲಯ ರಚಿಸಲಾಗುವುದು. ಹಾಗೆಯೇ ರಾಜ್ಯದಲ್ಲಿ ಜನತೆಗೆ ನೀಡಿದ ಜನಪರ ಯೋಜನೆಗಳಿಂದ ಮತದಾರರಲ್ಲಿ ಕೃತಜ್ಞತಾ ಭಾವ ಇದ್ದು, ಅವರ ಆಶೀರ್ವಾದದಿಂದ ರಾಜ್ಯದಲ್ಲಿ 20 ಸ್ಥಾನ ಗೆಲ್ಲುವುದು ಖಚಿತ. ಕಾಂಗ್ರೆಸ್ ಪಕ್ಷದ ಬಗ್ಗೆ ಇರುವ ಮತದಾರರ ಒಲವನ್ನು ಮತವಾಗಿ ಪರಿವರ್ತಿಸಲು ಪಕ್ಷದ ಚುನಾವಣಾ ಉಸ್ತುವಾರಿಗಳು ಬದ್ಧತೆಯಿಂದ ಶ್ರಮಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಾವಿರಾರು ಬೆಂಬಲಿಗರೊಂದಿಗೆ ರಾಜು ಆಲಗೂರು ನಾಮಪತ್ರ ಸಲ್ಲಿಕೆ; ಬಿಸಿಲನ್ನೂ ಲೆಕ್ಕಿಸದೆ ಮೊಳಗಿದ ಕಾಂಗ್ರೆಸ್ ಜೈಕಾರ
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಉಪಾಧ್ಯಕ್ಷ ಎಂ ಎ ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಕೆಪಿಸಿಸಿ ವೀಕ್ಷಕ ನವೀನ್ ಶೆಟ್ಟಿ, ಪಕ್ಷದ ಚುನಾವಣಾ ಉಸ್ತುವಾರಿಗಳು, ನಗರಸಭಾ ಸದಸ್ಯರು ಹಾಗೂ ಪಕ್ಷದ ವಿವಿಧ ಮುಂದಾಳುಗಳು ಇದ್ದರು.