ಹೊಸ ತಲೆಮಾರಿನ ಸಂಶೋಧಕರು ಯಾವುದೇ ವಸ್ತು-ವಿಷಯವನ್ನು ಬಿಡಿ ಘಟಕವಾಗಿ ನೋಡದೆ ಒಟ್ಟಾರೆ ಸಮಗ್ರ ಸಂಸ್ಕೃತಿ ವಿಕಾಸದ ಶೋಧನೆ ಅತ್ಯಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಬೆಂಗಳೂರು ನಗರದ ಕೆ ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದಿಂದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ “ಕನ್ನಡ ಸಂಶೋಧನೆಯ ಹೊಸ ಸಾಧ್ಯತೆಗಳು” ಕುರಿತು ಅಂತರ್ಜಾಲದ ಜೂಮ್ ವೇದಿಕೆಯ ಮೂಲಕ ಆಯೋಜಿಸಿದ್ದ 5 ದಿನಗಳ ರಾಷ್ಟ್ರಮಟ್ಟದ ‘ಸಂಶೋಧನಾ ಕಾರ್ಯಾಗಾರ’ದಲ್ಲಿ ಸಮಾರೋಪ ಭಾಷಣ ಮಾಡಿದರು.
“ಸಂಶೋಧನೆ ಎಂಬುದೇ ಯಾವಾಗಲೂ ಹೊಸ ಸಾಧ್ಯತೆಯಾಗಿರುತ್ತದೆ. ಅದು ನಿರಂತರ ಕ್ರಿಯೆಯೂ ಹೌದು. ಹೊಸದರ ಶೋಧನೆಯೂ ಹೌದು. ಜ್ಞಾನದ ವಿಕಾಸವಾದಂತೆಲ್ಲ ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಅದನ್ನು ಮತ್ತಷ್ಟು ನಿಖರವಾಗಿ ಕಂಡುಕೊಳ್ಳುವುದಕ್ಕೆ ಇರುವಂಥ ವಿಧಾನವೇ ಸಂಶೋಧನೆ. ತಲೆಮಾರಿನಿಂದ ತಲೆಮಾರಿಗೆ ಹಾಗೂ ಕಾಲದಿಂದ ಕಾಲಕ್ಕೆ ಸಂಶೋಧನೆ ಮಾಡುತ್ತ ಹೋದಂತೆ ಅದು ವಿಸ್ತರಿಸುತ್ತ ಹೋಗುತ್ತದೆ. ಆದ್ದರಿಂದ ಗೊತ್ತಿರುವ ವಿಷಯಗಳನ್ನು ಬಹುಶಿಸ್ತೀಯ ನೋಟದ ಮೂಲಕ ಒಂದು ವಿಶ್ಲೇಷಣಾ ಕ್ರಮದಲ್ಲಿ ಹೊಸ ಹೊಳಹು ಮತ್ತು ಹೊಸ ತಿಳುವಳಿಕೆಗಳಿಗೆ ತೆರೆದಿಡುವ ಕ್ರಮವನ್ನು ಸಂಶೋಧನಾರ್ಥಿಗಳು ಅರಿಯಬೇಕಾಗಿದೆ” ಎಂದು ತಿಳಿಸಿದರು.
“ಜರ್ಮನಿ ಮೂಲದ ಸಂಶೋಧಕ ಗುನ್ತೆ ಡಿ ಸುನ್ತೇಮರ್ ಅವರು ಮಹಾರಾಷ್ಟ್ರದ ಆದಿಮ ದೇವತೆಗಳನ್ನು ಕುರಿತು ನಡೆಸಿರುವ ಸಂಶೋಧನೆ ಹಾಗೂ ಕರ್ನಾಟಕ ಸಂಸ್ಕೃತಿ ಕುರಿತು ಶಂ ಬಾ ಜೋಶಿ ಅವರು ನಡೆಸಿರುವ ಸಂಶೋಧನೆಗಳಲ್ಲಿ ಹಲವಾರು ಸಾಮ್ಯತೆಗಳಿವೆ. ಪಶುಪಾಲಕ ಸಮಾಜ ಹಾಗೂ ಬೇಟೆಗಾರ ಸಮಾಜಗಳು ಆದಿಮವಾಗಿ ರೂಪುಗೊಂಡಿದ್ದು, ಇವುಗಳ ಚಲನೆಯನ್ನು ಕುರಿತಾದ ಇವರಿಬ್ಬರ ಸಂಶೋಧನೆಗಳು ಬಹಳ ವಿಶಿಷ್ಠವಾಗಿವೆ. ಗ್ರಂಥಸ್ಥ ಹಾಗೂ ಶಾಸನೋಕ್ತ ಮಾಹಿತಿಗಳನ್ನು ಮಾತ್ರ ಆಧರಿಸದೆ ಜಾನಪದ ಮೊದಲಾದ ಬಹು ಮೂಲಗಳಿಂದ ಸಂಶೋಧನೆ ನಡೆಸಿದ್ದಾರೆ. ಕರ್ನಾಟಕವು ಮಹಾರಾಷ್ಟ್ರದಷ್ಟೇ ಮತ್ತು ಅದಕ್ಕಿಂತ ಪ್ರಾಚೀನವಾದ ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ. ನಾವು ಈ ಹಿನ್ನೆಲೆಯಲ್ಲಿ ಅಧ್ಯಯನ ಕೈಗೊಂಡು ಬಹುನೆಲೆಯ ಆಕರಗಳನ್ನು ತೌಲನಿಕವಾಗಿ ಪರಿಶೀಲಿಸಿ ಹೊಸಹೊಳಹುಗಳನ್ನು ಕಂಡುಕೊಳ್ಳಬಹುದು” ಎಂದು ವಿವರಿಸಿದರು.
“ಈಗಾಗಲೇ ನಡೆದಿರುವ ಸಂಶೋಧನೆಗಳ ಮೇಲೆ ಮರುಶೋಧನೆ ಕೈಗೊಳ್ಳಬಹುದು. ಹಿಂದಿನವರು ನೀಡಿರುವ ಅಪಾರವಾದ ಮಾಹಿತಿಗಳ ಧ್ವನಿಯನ್ನು ಅರಿತು ಒಪ್ಪಿತ ಸತ್ಯಗಳ ಮೇಲೆ ಪುನರಪಿ ಅಧ್ಯಯನ ಮಾಡಲು ಸಾಕಷ್ಟು ಅವಕಾಶಗಳಿವೆ. ಯಾಕೆಂದರೆ ಸಂಶೋಧನೆ ಪೂರ್ಣಸತ್ಯ, ಪೂರ್ಣವಾಸ್ತವ ಲೆಕ್ಕವಲ್ಲ. ಅಧ್ಯಯನದಲ್ಲಿ ಮುಂದುವರೆಯಲಿಕ್ಕೆ ಬೇರೆ ಬೇರೆ ಎಳೆಗಳನ್ನು ಹಿಡಿದು ನೋಡುತ್ತ ಹೋಗುವುದು ಬಹಳ ಮುಖ್ಯ. ಬಹುಶಿಸ್ತೀಯ ಮಾದರಿಗಳಲ್ಲಿ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತಿತರ ಶಾಸ್ತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದರೆ ನಮ್ಮ ಸಾಂಸ್ಕೃತಿಕ ನೆಲೆ-ಬೆಲೆಗಳು ಹೊಸರೂಪದಲ್ಲಿ ಕಂಡುಬರುತ್ತವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ದಲಿತ ವಿರೋಧಿ ತುಮಕೂರು ಜಿಪಂ ಸಿಇಒ: ಕಾನೂನು ಕ್ರಮಕ್ಕೆ ದಲಿತ ಮುಖಂಡರ ಆಗ್ರಹ.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಪ್ರಾಧ್ಯಾಪಕರೂ ಆದ ಪ್ರೊ. ಎನ್ ಕೆ ಲೋಲಾಕ್ಷಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, “ಪ್ರಚಲಿತ ಕಾಲಘಟ್ಟದಲ್ಲಿ ಸತ್ಯಶೋಧನೆಯೇ ಸಂಶೋಧನೆಯೆಂದು ಹೊರಡುವುದೇ ಸಮಸ್ಯೆಯಾಗಿ ಕಾಣುತ್ತದೆ. ಯಾಕೆಂದರೆ ಒಂದೇ ಸತ್ಯವಿಲ್ಲ; ಹಲವು ಸತ್ಯಗಳಿವೆ. ಒಂದೇ ಸುಳ್ಳು ಇಲ್ಲ; ಹಲವು ಸುಳ್ಳುಗಳಿವೆ. ಕಾಲದಿಂದ ಕಾಲಕ್ಕೆ ಸತ್ಯ, ಸುಳ್ಳುಗಳು ಬದಲಾಗುತ್ತ ಹೋಗಿವೆ. ನಮ್ಮ ಸಾಹಿತ್ಯವು ಕಲ್ಪನಾತ್ಮಕವಲ್ಲದ ಜ್ಞಾನವೂ ವಿಜ್ಞಾನವೂ ಆಗಿದೆ. ಇದನ್ನು ನಮ್ಮ ಸಮಾಜಕ್ಕೆ ವಿಸ್ತರಿಸಬೇಕಾಗಿದೆ. ನಮ್ಮ ಪರಿಸ್ಥಿತಿ ಹಾಗೂ ಮನಸ್ಥಿತಿಗೆ ಅನುಗುಣವಾಗಿ ಸಂಶೋಧನೆ ನಡೆಯುತ್ತವೆ. ಹೊಸಚಿಂತನೆಗಳು ಸತ್ಯ ಪ್ರತಿಪಾದನೆಯಲ್ಲದೆ ನೈತಿಕವೂ ಕಾನೂನಾತ್ಮಕವೂ ಆದ ವ್ಯಾಖ್ಯಾನದಿಂದ ಕೂಡಿರಬೇಕು” ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಸೈಯದ್ ಮುಯಿನ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯಾಗಾರದ ಸಂಯೋಜಕ ಕನ್ನಡ ಪ್ರಾಧ್ಯಾಪಕ ಡಾ. ಎಂ ಭೈರಪ್ಪ ಅವರು ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಡಾ. ಸರ್ವೇಶ್ ಬಿ ಎಸ್, ಕನ್ನಡ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ್ ಎನ್, ಡಾ. ರವಿಶಂಕರ್ ಎ ಕೆ, ಡಾ. ಪ್ರೇಮಕುಮಾರ್ ಕೆ, ಡಾ. ಕಿರಣಕುಮಾರ್ ಹೆಚ್ ಜಿ ಸೇರಿದಂತೆ ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತ ಸುಮಾರು 300 ಜನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಇದ್ದರು.
