ರೈತರಿಗೆ ಬರಪರಿಹಾರ ನೀಡುವಲ್ಲಿ ಸರ್ಕಾರ ವೈಜ್ಞಾನಿಕ ವಿಧಾನವನ್ನು ಅನುಸರಿಸಿಲ್ಲ. ಕಳೆದ ಮೂರು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬಾಳೆ, ಕಬ್ಬು, ತೆಂಗು, ಮೆಕ್ಕೆಜೋಳ ಬೆಳೆಗಳು ಹಾನಿಯಾಗಿದ್ದು, ವೈಜ್ಞಾನಿಕವಾಗಿ ಬೆಳೆನಷ್ಟ ಪರಿಹಾರವನ್ನು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
ಬೆಂಗಳೂರಿನ ರಾಜಭವನದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಿಗೆ ರೈತರ ಸಮಸ್ಯೆಗಳ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಭೀಕರ ಬಿರುಗಾಳಿಯಿಂದ ನೊಂದಿರುವ ರೈತರ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಪ್ರತಿ ಎಕರೆ ಬಾಳೆ ಬೆಳೆ ನಷ್ಟಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ದರ ನೀಡಬೇಕು ಹಾಗೂ ಬರ ಪರಿಹಾರವನ್ನು ತಾರತಮ್ಯ ಇಲ್ಲದೆ ಎಲ್ಲ ರೈತರಿಗೂ ನೀಡುವಂತಾಗಬೇಕು” ಎಂದು ಆಗ್ರಹಿಸಿದರು.
“ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಹಗಲು ವೇಳೆ 10 ಗಂಟೆ ವಿದ್ಯುತ್ ಕೊಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹೊಸ ಸಂಪರ್ಕ ಪಡೆಯಲು ಮೊದಲು ಇದ್ದಂತಹ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಳೆದ ಸಾಲಿನ ಪ್ರತಿ ಟನ್‌ಗೆ 150 ರೂಪಾಯಿಯ ಸರ್ಕಾರ ಆದೇಶದ ಪ್ರಕಾರ ರಾಜ್ಯದಲ್ಲಿ ₹950 ಕೋಟಿ ರೂಪಾಯಿ ರೈತರಿಗೆ ಬರಬೇಕು” ಎಂದರು.
“ಕಳೆದ ಸಾಲಿನ ಕಾರ್ಖಾನೆಗಳಿಂದ ಲಾಭಾಂಶವನ್ನು ಹಂಚಿಕೆ ಮಾಡಿಸಬೇಕು ಹಾಗೂ ಖಾಸಗಿ ಮತ್ತು ಸಾಲ ಪಡೆದ ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿದ ಬ್ಯಾಂಕುಗಳು ಬೇರೆ ರಾಜ್ಯಗಳಿಗೆ ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿವೆ. ಬರದಿಂದ ನೊಂದಿರುವ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 10 ರೂಪಾಯಿಯನ್ನು ಕೊಡಿಸಲು ಕ್ರಮ ವಹಿಸಬೇಕು. ಸರ್ಕಾರದ ಬ್ಯಾಂಕ್‌ಗಳು ಸಿಬಿಲ್ ಸ್ಕೋರನ್ನು ಪರಿಗಣಿಸಬಾರದು” ಎಂದು ಒತ್ತಾಯಿಸಿದರು.
“ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ವಸಪಡಿಸಿಕೊಂಡಿರುವ ಮತ್ತು ಬಿ ಖರಾಬುಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಕಟ್ಟಡಗಳನ್ನು ಕಟ್ಟಿ ಸಾರ್ವಜನಿಕ ಆಸ್ತಿಯನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ರಕ್ಷಣೆ ನೀಡುವ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಬೆಂಗಳೂರನಲ್ಲಿ ಗದಗ ಜಿಲ್ಲೆ ಮುಂಡರಗಿ ತಾಲೂಕು ಸಿಂಗಟಾಲೂರು ಮತ್ತು ಹುಲಿಗುಡ್ಡ ಹಾಗೂ ಜಾಲವಡಿಗಿ ಏತ ನೀರಾವರಿ ಯೋಜನೆಯನ್ನು ಹಾಗೂ 28 ಕೆರೆಗಳಿಗೆ ನೀರು ತುಂಬಿಸುವ ಕಾಮಾಗಾರಿಯನ್ನು, ಚುಣಾವಣಾ ನೀತಿ ಸಂಹಿತೆ ಮುಗಿದ ನಂತರ ಶಿಘ್ರದಲ್ಲಿ ಕಾಮಾಗಾರಿಯಾಗುತ್ತದೆ. ಮುಂಡರಗಿ ತಾಲೂಕು ಪೈಪ್‌ಲೈನ್ ಮುಖಾಂತರ ನೀರಾವರಿ ಯೋಜನೆ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು” ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಮೀನಿನ ಪಹಣಿ ಸರಿಪಡಿಸುವಂತೆ ರೈತ ಸಂಘ ಮನವಿ
ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರಧಾನ ಕಾರ್ಯದರ್ಶಿ ವಿಠ್ಠಲ ಗಣಾಚಾರಿ, ರಾಜ್ಯ ಕಾರ್ಯಧ್ಯಕ್ಷ ತೇಜಸ್ವಿ ಪಟೇಲ್, ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜ್, ಹನುಮಯ್ಯ, ವಕೀಲ ಕಿಶಾನ್ ಹರ್ಷಕುಮಾರ, ಮಲಿಯೂರು ಮಹೇಂದ್ರ, ಅರಳಿಕಟ್ಟೆ ಕುಮಾರ್, ಮುದ್ದಹಳ್ಳಿ ಚಿಕ್ಕಸ್ವಾಮಿ, ಗಣೇಶ್ ಅಂಬಳೆ, ಮಹದೇವಸ್ವಾಮಿ, ಸೋಮೇಶ್ ಪಟೇಲ್, ನೆಲಮಂಗಲ ತಾಲೂಕು ಅಧ್ಯಕ್ಷ ರಾಜೇಶ್, ಅಪ್ಪಾಜಣ್ಣ ಸೇರಿದಂತೆ ಬಹುತೇಕ ರೈತ ಮುಖಂಡರು ಇದ್ದರು.
