ಸಾಮಾನ್ಯರ ಭಾರತವು ಒಳ್ಳೆಯ ದಿನಗಳನ್ನು ಕಂಡಿದೆಯೇ?

Date:

ಪಾಲ್ಕಿಯವರು ಯಾವ ಭಾರತದಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ಮಂಡಿಸಿದ ವಿಷಯಗಳಿಂದ ತಿಳಿಯುತ್ತದೆ. ಜನ ಸಾಮಾನ್ಯರ ಭಾರತದಲ್ಲಿ ಇವರು ಜೀವಿಸುತ್ತಿರುವಂತೆ ಕಾಣಿಸುತ್ತಿಲ್ಲ. ಪಾಲ್ಕಿಯವರು ವಿಮಾನಗಳ ಬದಲಿಗೆ ಒಮ್ಮೆಯಾದರೂ ರೈಲಿನ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಿದ್ದರೆ ಸಾಮಾನ್ಯರ ಸಂಕಟಯುಕ್ತ ಯಾತನೆಯ ಭಾರತದ ಪರಿಚಯವಾಗುತಿತ್ತು.

 

ಒಂದು ವರ್ಷಕ್ಕೂ ಮೊದಲು ದಿ ಆಕ್ಸ್‌ಫರ್ಡ್ ಯುನಿಯನ್ ಸೊಸೈಟಿಯು ‘ಮೋದಿಯ ಭಾರತ ಸರಿ ಹಾದಿಯಲ್ಲಿದೆಯೇ’ ಎಂಬ ವಿಷಯದ ಕುರಿತು ಸಂವಾದ ಎರ್ಪಡಿಸಿತ್ತು. ಇದರಲ್ಲಿ ಹೇಸರಾಂತ ಭಾರತೀಯರು ಪರ ಹಾಗು ವಿರೋಧ ವಾದಗಳನ್ನು ಮಂಡಿಸಿದ್ದರು. ಅವರಲ್ಲಿ ಒಬ್ಬರಾದ ಪತ್ರಕರ್ತೆ ಪಾಲ್ಕಿ ಶರ್ಮಾ ಉಪಾಧ್ಯಾಯ ಇವರು ಮಂಡಿಸಿದ ‘ಮೋದಿ ಭಾರತ ಸರಿ ಹಾದಿಯಲ್ಲಿದೆ’ ಎಂಬ ವಾದವು ಇತ್ತಿಚೆಗೆ ಹೆಚ್ಚು ಪ್ರಸಾರದಲ್ಲಿದ್ದು, ಚರ್ಚೆಗೆ ಒಳಗಾಗಿದೆ.

ಮೋದಿಯವರ ಕಾಲದಲ್ಲಿ ಭಾರತದ ಪ್ರಗತಿಯ ಗುರುತಾಗಿ ಪಾಲ್ಕಿಯವರು ಮೂರು ಮುಖ್ಯ ಅಭಿವೃದ್ಧಿಗಳನ್ನು ಹೇಳುತ್ತಾರೆ. ಮೊದಲನೆಯದು ಆರ್ಥಿಕ ಒಳಗೊಳ್ಳುವಿಕೆ (ವ್ಯಾಪಾರಿಗಳು ಕಿಖ ಕೋಡ್ ಮೂಲಕ ವ್ಯವಹರಿಸಲು ತಮ್ಮ ಮೊಬೈಲ್ ಪೋನ್‌ಗೆ ಬ್ಯಾಂಕ್ ಖಾತೆ ಸಂಪರ್ಕ ಹೊಂದಿರುವುದು), ಎರಡನೆಯದು ಇಂಟರ್ನೆಟ್ ಮತ್ತು ಮೊಬೈಲ್ ಜಾಲ – ಡಿಜಿಟಲ್ ಇಂಡಿಯಾ. ಇದು ಒಂಬತ್ತು ವರ್ಷದ ಹಿಂದೆ 15% ಇದ್ದು, ಈಗ 48%ಗೆ ಏರಿದೆ ಎಂದಿದ್ದಾರೆ. ಮೂರನೆಯದಾಗಿ, ಒಂಬತ್ತು ವರ್ಷಗಳ ಹಿಂದೆ 67 ಮಿಲಿಯನ್ ಇದ್ದ ವಿಮಾನ ಸಂಚಾರ ದಟ್ಟಣೆಯು ಈಗ ದ್ವಿಗುಣವಾಗಿದೆ ಎನ್ನುವ ಅವರು ತಾನು ಜೀವಿಸಿದ ಹಲವು ‘ಭಾರತಗಳಲ್ಲಿ, ಮೋದಿಯವರ ಭಾರತವು ನಾಯಕತ್ವ ಮತ್ತು ಸ್ಪೂರ್ತಿಗಾಗಿ ವಿಶ್ವವೇ ಎದುರು ನೋಡುತ್ತಿರುವ ಆತ್ಮ ವಿಶ್ವಾಸದ ಭಾರತವಾಗಿದೆ.

ಭಾರತೀಯರು ತಮ್ಮ ದೇಶದಲ್ಲಿ ಶ್ರಿಮಂತರಾಗಿದ್ದಾರೆ, ಆದ್ದರಿಂದ ವಿದೇಶದಲ್ಲಿ ಅವರು ಹೆಚ್ಚು ಆತ್ಮವಿಶ್ವಾಸದಿಂದ ಇರುತ್ತಾರೆ. ಲಂಡನ್ನಿನ ವಿಮಾನ ನಿಲ್ದಾಣದಲ್ಲಿ ಭಾರತೀಯರು ತಮ್ಮ ಪಾಸ್‍ಪೊರ್ಟ್‍ಗಳನ್ನು ಹೆಮ್ಮೆಯಿಂದ ತೋರಿಸುವುದನ್ನು ನಾನು ಗಮನಿಸಿದೆ ಎನ್ನುವ ಪಾಲ್ಕಿಯವರು, ಬಾಲಿವುಡ್, ಮಸಾಲ ಟೀ, ಕ್ರಿಕೆಟ್, ಯೋಗ ಇವುಗಳಿಗೆ ಹೆಸರಾಗಿರುವ ಭಾರತವು ವಿಶ್ವದ ಸಹಕರಣದ ಮಹಾ ಶಕ್ತಿಯಾಗಿದ್ದು, ಉಗ್ರಗಾಮಿಗಳನ್ನು ನಿಗ್ರಹಿಸುವ ಬಲ ಹೊಂದಿದೆ ಎನ್ನುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಪಾಲ್ಕಿ ಶರ್ಮಾ ಉಪಾಧ್ಯಾಯ

ಇದಲ್ಲದೆ, ಗ್ಯಾಸ್ ಸಂಪರ್ಕ, ಬ್ಯಾಂಕ್ ಖಾತೆಗಳು, ವಿಮೆ ಹೊಂದಿರುವ ಫಲಾನುಭವಿಗಳ ಅಂಕಿ ಅಂಶ ನೀಡುತ್ತಾರೆ. 2014 ರಲ್ಲಿದ್ದ ಜನರ ತಲಾದಾಯ ರೂ. 86000 ದಿಂದ ಈಗ 1,72,000ಕ್ಕೆ ಏರಿದೆ ಎನ್ನುತ್ತಾರೆ. ಇವರ ಪೂರ್ಣ ಭಾಷಣವನ್ನು ಈ ಲಿಂಕ್‌ನಲ್ಲಿ ಕೇಳಿಸಿಕೊಳ್ಳಬಹುದಾಗಿದೆ https://www.youtube.com/watch?v=yjFEYRN17hU

ಪಾಲ್ಕಿಯವರು ಯಾವ ಭಾರತದಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ಮಂಡಿಸಿದ ವಿಷಯಗಳಿಂದ ತಿಳಿಯುತ್ತದೆ. ಜನ ಸಾಮಾನ್ಯರ ಭಾರತದಲ್ಲಿ ಇವರು ಜೀವಿಸುತ್ತಿರುವಂತೆ ಕಾಣಿಸುತ್ತಿಲ್ಲ. ಮೇಡಂ ಪಾಲ್ಕಿಯವರು ವಿಮಾನಗಳ ಬದಲಿಗೆ ಒಮ್ಮೆಯಾದರೂ ರೈಲಿನ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಿದ್ದರೆ ಸಾಮಾನ್ಯರ ಸಂಕಟಯುಕ್ತ ಯಾತನೆಯ ಭಾರತದ ಪರಿಚಯವಾಗುತಿತ್ತು. ದೇಶದ, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಮಧ್ಯ ಪ್ರದೇಶಗಳ ಕಡೆಯ ನೂರಾರು ರೈಲುಗಳ ಎಲ್ಲಾ ಸಾಮಾನ್ಯ ಮತ್ತು ಸ್ಲೀಪರ್ ಬೋಗಿಗಳು ತುಂಬಿ ತುಳುಕಿ, ಒಬ್ಬರ ಮೇಲೊಬ್ಬರು ಕುಳಿತು ಪ್ರಯಾಣಿಸುವ ದೃಶ್ಯವನ್ನು ಅವರು ನೋಡಬಹುದಿತ್ತು.

ನಿಲ್ದಾಣಗಳಲ್ಲಿ ಮಲಗಿರುವ ಪ್ರಯಾಣಿಕರು, ಅಳುತ್ತಿರುವ ನಿತ್ರಾಣ ಮಕ್ಕಳು, ಬೋಗಿಯೋಳಗೆ ತುಂಬಿರುವ ಪ್ಲಾಸ್ಟಿಕ್ ಕಸ, ಶೌಚಾಲಯದ ಗಬ್ಬು ವಾಸನೆ, ಒತ್ತೊತ್ತಾಗಿ ಕುಳಿತ ಹೆಚ್ಚಿನ ಯುವಕರು, ಯುವ ದಂಪತಿಗಳು, ಪುಟ್ಟ ಮಕ್ಕಳು ಮತ್ತು ಆಗಲೋ ಈಗಲೋ ಜಿಪ್ಪು ಹರಿದು ಬಾಯಿ ಬಿಡಲಿರುವ ಲಗೇಜುಗಳು – ಎಲ್ಲದರಲ್ಲೂ ಕಾಣುವ ಅತಂತ್ರ, ಅಸಹಾಯಕತೆ ರಾಚುತ್ತದೆ. ಇವರೊಂದಿಗೆ ಮಾತು ಬೆಳೆಸಿದ್ದರೆ, ಸುಣ್ಣ ಬಣ್ಣ ಹಚ್ಚುವವರು, ಟೈಲ್ಸ್ ಹಾಕುವವರು, ಬಡಗಿ, ಹೋಟೆಲ್ ಸಪ್ಲೈಯರ್ಸ್, ಡೆಲಿವರಿ ಬಾಯ್ಸ್ – ಹೀಗೆ ಹತ್ತು ಹಲವು ಕೇಲಸದಲ್ಲಿ ತೊಡಗಿರುವ ಇವರು ದಿನಕ್ಕೆ ರೂ. 400 ರಿಂದ 800 ದುಡಿಯುವ ಶ್ರಮಿಕರೆಂದು ತಿಳಿಯುತ್ತದೆ.

ಪ್ರತಿ ಯುವಕನೂ ಮೊಬೈಲ್ ಹೊಂದಿದ್ದು, ನರೇಗಾ ಕಾಲದ ದುಡಿಮೆ ಹಣ ಮತ್ತು ಮೋದಿಯವರ 15 ಲಕ್ಷ ರೂ. ಪಡೆಯುವ ಭರವಸೆಯಲ್ಲಿ ಬ್ಯಾಂಕ್ ಖಾತೆ ತೆಗೆದಿರುತ್ತಾರೆಂದು ತಿಳಿಯುತ್ತದೆ. ತಮ್ಮ ಪ್ರೀತಿ ಪಾತ್ರರ ಸನಿಹದಲ್ಲಿರಲು ಹಾಗೂ ಕುಟುಂಬಕ್ಕೆ ಹಣ ಕಳುಹಿಸಲು ಇವರಿಗೆ ಮೊಬೈಲ್ ಅತಿ ಮುಖ್ಯವಾದ ಕಾರಣ ಸಾಲ ಮಾಡಿ ಖರೀದಿಸಿದ್ದನ್ನು ಅವರು ಹೇಳುತ್ತಾರೆ. ನಗರಗಳಲ್ಲಿ ಇವರು ಬದುಕುವ ಜಾಗಗಳನ್ನು ಪಾಲ್ಕಿಯವರು ಒಮ್ಮೆ ನೋಡಿದ್ದರೆ, ಅವರ ಬದುಕಿನ ದರ್ಶನವಾಗುತಿತ್ತು.

ತಮ್ಮ ಗ್ರಾಮಗಳಲ್ಲಿ ಸಣ್ಣದೇ ಆದರೂ, ಗಾಳಿ ಬೆಳಕಿರುವ ಮನೆಯಲ್ಲಿ ಸಾಮಾಜಿಕ ಭದ್ರತೆಯೊಂದಿಗೆ ನೆಲಸಿದ್ದ ಇವರು ನಗರಗಳಲ್ಲಿ ಅತಿ ಕಳಪೆ ಮಟ್ಟದ ಅಸುರಕ್ಷಿತ ಮತ್ತು ಅತಂತ್ರತೆಯ ಜೀವನ ಸಾಗಿಸುತ್ತಿರುವ ಈ ಯುವಜನಾಂಗದ ಕಣ್ಣುಗಳು ರಕ್ತವಿಲ್ಲದೆ ಬಿಳಿಚಿಕೊಂಡಿದ್ದು, ಅವು ಅಸಹಾಯಕತೆಯ ಮಡುವಾಗಿವೆ.

ರಾಷ್ಟೀಯ ಸ್ಯಾಂಪಲ್ ಸರ್ವೆ (NSS) ಕಚೇರಿಯ  ನಿರುದ್ಯೋಗ ಸಮೀಕ್ಷೆ ವರದಿ ಪ್ರಕಾರ 2017-18 ರಲ್ಲಿ ಒಟ್ಟಾರೆ 6.1%ರಷ್ಟು ನಿರುದ್ಯೋಗ ದರ ಹೊಂದಿದ್ದು, ಇದು ಹಿಂದಿಗಿಂತ (2011-12 ರಲ್ಲಿನ ದರ 2.2%) ಅತಿ ಹೆಚ್ಚಿರುತ್ತದೆಂದು ದಿ ಎಕನಾಮಿಕ್ ಟೈಮ್ಸ್ 13ರ ಎಪ್ರಿಲ್ 2019 ರಂದು ವರದಿ ಮಾಡುತ್ತದೆ. ಇದೇ ಸಂವಾದದಲ್ಲಿ ಪಾಲ್ಲೋಂಡಿದ್ದ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು 2018ರ ನಂತರ ಸರ್ಕಾರವು ಸಮೀಕ್ಷೆಯನ್ನು ನಡೆಸುವುದೇ ಇಲ್ಲ, ಬದಲಿಗೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಎಂಬ ಸ್ವತಂತ್ರ ಸಂಸ್ಥೆಯು ಈ ಸಮೀಕ್ಷೆ ನಡೆಸಿದ್ದು, ಆ ಪ್ರಕಾರ ಏಪ್ರಿಲ್ 2023ಕ್ಕೆ ನಿರುದ್ಯೋಗ ದರವು 8.3% ಗೆ ಏರಿದೆ ಮತ್ತು ಇದು ಎಲ್ಲಾ ಕಾಲಗಳ ಸ್ಥಿತಿಗಿಂತ ಹೆಚ್ಚಿನದಾಗಿದೆ ಎಂದು ತಮ್ಮ ವಾದದಲ್ಲಿ ಹೇಳುತ್ತಾರೆ.

ಇನ್ನು, ಅಸುರಕ್ಷತೆ ಮತ್ತು ಅಪೌಷ್ಟಿಕತೆಯಲ್ಲಿ ಬದುಕುತ್ತಿರುವ ಮಹಿಳೆ ಮತ್ತು ಮಕ್ಕಳ ಭಾರತವನ್ನು ಪಾಲ್ಕಿಯವರಿಗೆ ಪರಿಚಯಿಸೋಣ. ಅಧಿಕಾರ, ಹಣ, ಮತ್ತು ಪಾಳೇಗಾರಿಕೆ ಮನೋಭಾವದ ಗಂಡಸರು, ಮಹಿಳೆಯರ ಮೇಲಿನ ಲೈಂಗಿಕ ಪೀಡನೆ, ಮತ್ತು ಅತ್ಯಾಚಾರವೆಸಗುವುದು ಹಾಗೂ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಗ್ರಾಮ ಮತ್ತು ನಗರ ಎರಡೂ ಕಡೆ ಕೆಳವರ್ಗದ ಶ್ರಮಿಕರು ಮತ್ತು ಕಚೇರಿಯಲ್ಲಿ ದುಡಿಯುವ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ತಮ್ಮ ಕುಟುಂಬದವರಿಂದಲೇ ದೌರ್ಜನ್ಯಕ್ಕೊಳಗಾಗುವುದು ದಿನಚರಿಯಾಗಿ ಘಟಿಸುತ್ತಿದೆ.

2022 ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಶೇ.4 ರಷ್ಟು ಹಾಗೂ ಮಕ್ಕಳ ಮೇಲಿನ ಅದರಾಧಗಳು 8.7ರಷ್ಟು ಹೆಚ್ಚಾಗಿದೆ ಎಂಬ ರಾಷ್ಟ್ರೀಯ ಅಪರಾಧಗಳ ಬ್ಯೂರೋ (NCRB) ವರದಿಯನ್ನು 4ನೇ ಡಿಸೆಂಬರ್ 2023ರ ಇಂಡಿಯಾ ಟುಡೆ ಪತ್ರಿಕೆಯಲ್ಲಿ ನಳಿನಿ ಶರ್ಮಾ ಅವರು ಉಲ್ಲೇಖಿಸಿ ವರದಿ ಮಾಡಿರುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಪ್ರತಿ 51 ನಿಮಿಷಕ್ಕೆ ಒಂದು ಘಟನೆ ಜರುಗುತ್ತಿದೆಯೆಂದು ಅಂದಾಜಿಸಲಾಗಿದೆ. NCRB 2019 ವರದಿಯು ಕಳೆದ 10 ವರ್ಷಗಳಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು ಶೇ. 44 ರಷ್ಟು ಹೆಚ್ಚಾಗಿವೆ ಎಂದಿರುವುದನ್ನು ತೃಪ್ತಿ ಪೈಕರೆಯವರು 6ನೇ ಮೇ 2020ರ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

2022ರಲ್ಲಿ ಸರಾಸರಿ 172ಕ್ಕೂ ಹೆಚ್ಚು ಹುಡುಗಿಯರು ನಾಪತ್ತೆಯಾಗಿದ್ದು, ಜೊತೆಗೆ 170 ಹುಡುಗಿಯರನ್ನು ಅಪಹರಿಸಲಾಗಿದೆ ಮತ್ತು ಪ್ರತಿದಿನ ಸುಮಾರು ಮೂರು ಹುಡುಗಿಯರನ್ನು ಕಳ್ಳಸಾಗಣೆ ಮಾಡಲಾಗಿದೆ ಎಂಬ NCRB ವರದಿಯನ್ನು ಜಾನ್ ರಾಬಟ್ಸ್ 6ನೇ ಫೆಬ್ರುವರಿ 2024ರಂದು ಉಲ್ಲೀಖಿಸಿ ದಿ ನ್ಯೂಸ್ ಮಿನಿಟ್‍ನಲ್ಲಿ ವರದಿ ಮಾಡಿರುತ್ತಾರೆ.

NFHS-5 ಸಮೀಕ್ಷೆಯ ಪ್ರಕಾರ ಲಕ್ಷದ್ವೀಪವನ್ನು ಹೊರತುಪಡಿಸಿ, ಇಡೀ ದೇಶದಲ್ಲಿ ಎಲ್ಲಿಯೂ ಕೂಡ 100% ರಷ್ಟು ಜನರು ಶೌಚಾಲಯವನ್ನು ಹೊಂದಿಲ್ಲವೆಂದು, ಗ್ರಾಮೀಣ ಪ್ರದೇಶದಲ್ಲಿ 40% ಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಗ್ಯಾಸ್ ಇಲ್ಲವೆಂದು, ಹಾಗೂ ಗರ್ಭಿಣಿಯರು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿರುವ ಅಂಶಗಳು ಕಂಡುಬಂದಿದೆ ಎಂದು ದಿನಾಂಕ ಜುಲೈ 28, 2023 ರಂದು ಬನ್ಜೋತ್ ಕೌರ್ ಅವರು the wire ನಲ್ಲಿ ವರದಿ ಮಾಡಿರುತ್ತಾರೆ.

ಇವೆಲ್ಲವುಗಳ ಜೊತೆಗೆ ಹಸಿವಿನ ಭಾರತವೂ ಇದೆ. ಜಾಗತಿಕ ಹಸಿವು ಸೂಚ್ಯಂಕದ (ಗ್ಲೊಬಲ್ ಹಂಗರ್ ಇಂಡೆಕ್ಸ್) 2023 ರ ಪ್ರಕಾರ ಭಾರತವು 125 ದೇಶಗಳಲ್ಲಿ 111ನೇ ಸ್ಥಾನ ಪಡೆದಿದ್ದು, ಇದು ಅನೇಕ ದಕ್ಷಿಣ ಎಷಿಯಾ ಮತ್ತು ಆಫ್ರಿಕದ ಬಡ ದೇಶಗಳಿಗಿಂತ ಕೆಳಗಿದೆ ಎನ್ನುವುದು ತಿಳಿದು ಬರುತ್ತದೆ. 2022ರ ಆಹಾರ ಭದ್ರತೆ ಮತ್ತು ಪೋಷಣಾ ಸ್ಥಿತಿಯ ವಿಶ್ವ ವರದಿ ಪ್ರಕಾರ ಭಾರತದಲ್ಲಿ 223.3 ಮಿಲಿಯನ್ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದಿರುವುದನ್ನು ಮುಂಬೈನ ಇಂಟರ್‌ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ಪಾಪ್ಯುಲೇಷನ್ ಸೈನ್ಸಸ್‍ನಲ್ಲಿ ಡಾಕ್ಟರಲ್ ಫೆಲೊ ಆಗಿರುವ ನಂದಲಾಲ್ ಮಿಶ್ರಾರವರು ಉಲ್ಲೇಖಿಸುತ್ತಾರೆ. ಈ ವಿಷಯದಲ್ಲಿ ಭಾರತದ ಮಕ್ಕಳ ಕ್ಷೀಣ ಬೆಳವಣಿಗೆ ಸ್ಥಿತಿಯು ಅನೇಕ ಕಡಿಮೆ ಆದಾಯದ ಆಫ್ರಿಕನ್ ದೇಶಗಳಿಗಿಂತ ಕೆಳಗಿದೆ.

NFHS-5ರ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂರನೇ ಒಂದು ಭಾಗದಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಮತ್ತು ಕಡಿಮೆ ತೂಕವನ್ನು ಹೊಂದಿದ್ದರೆ, ಪ್ರತಿ ಐದನೇಯ ಮಗು ಸೊರಗುವಿಕೆಯಿಂದ ಬಳಲುತ್ತಿದೆ ಎಂದು ನಂದಲಾಲ್ ಮಿಶ್ರಾರವರು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಪಾಲ್ಕಿಯವರು ಹೇಳಿದ ರೂ 172,000 ತಲಾದಾಯದ ಲೆಕ್ಕವನ್ನು ನೋಡೋಣ. ಈ ಮೊತ್ತದ ಪ್ರಕಾರ ಸರಾಸರಿ ಪ್ರತಿ ವ್ಯಕ್ತಿಯ ತಿಂಗಳ ಆದಾಯ ರೂ.14,333 ಆಗುತ್ತದೆ. ಆದರೆ ದೇಶದ ಎಲ್ಲರ ಕಿಸೆಗೂ ಈ ಆದಾಯ ಬಂದಿತು ಎಂದರ್ಥವಲ್ಲ. ದೇಶದ ಕೆಲವೇ ಕೆಲವು ಅತಿ ಶ್ರಿಮಂತರ ಆದಾಯವನ್ನು ಸಹ ಎಲ್ಲರಿಗೂ ಸಮನಾಗಿ ಹಂಚಿ ತೋರಿಸಿರುವ ಲೆಕ್ಕ ಇದಾಗಿದೆ. ಉದಾಹರಣೆಗೆ ಮುಖೇಶ್ ಅಂಬಾನಿಯ ಒಂದು ದಿನದ ಆದಾಯ ಸುಮಾರು 160 ಕೋಟಿಯಾದರೆ, ಅದಾನಿಯವರ ಪ್ರತಿದಿನದ ಸಂಬಳ ಸುಮಾರು ರೂ. 20,03,51,70,789 ಗಳಷ್ಟಿದೆ ಎನ್ನಲಾಗಿದೆ. ಈ ಸಂಖ್ಯೆಯನ್ನು ಓದುವುದೇ ಸಾಮಾನ್ಯರಿಗೆ ಕಷ್ಟ. ಹೀಗೆ ಇಂತಹವರೆಲ್ಲರ ಆದಾಯವನ್ನು ದೇಶದ ಎಲ್ಲಾ ಜನರ ಆದಾಯವೆಂಬಂತೆ ಸರಾಸರಿ ಲೆಕ್ಕ ಮಾಡಿ ತೋರಿಸಲಾಗಿದೆ.

ಇನ್ ಇಕ್ವಾಲಿಟಿ ರಿಪೋರ್ಟ್ 2022 (Inequality Report) ವರದಿಯು ಹೆಚ್ಚುತ್ತಿರುವ ಬಡತನ ಮತ್ತು ಶ್ರೀಮಂತ ಗಣ್ಯರನ್ನು ಹೊಂದಿರುವ ಭಾರತವು ವಿಶ್ವದ ಅತ್ಯಂತ ಅಸಮಾನ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿದೆ. ಭಾರತದಲ್ಲಿ ಮೇಲ್ವರ್ಗದ 10% ಜನರು ಒಟ್ಟು ರಾಷ್ಟ್ರೀಯ ಆದಾಯದ 57% ಹೊಂದಿದ್ದು, ಅದರಲ್ಲಿನ ಅತಿ ಎತ್ತರದ ಶ್ರೇಣಿಯ 1% ರಷ್ಟು ಜನರು ಒಟ್ಟು ರಾಷ್ಟ್ರೀಯ ಆದಾಯದ 22% ಹೊಂದಿದ್ದಾರೆ. ಆದರೆ, ಕೆಳವರ್ಗದ 50% ಜನರು ಒಟ್ಟು ರಾಷ್ಟ್ರೀಯ ಆದಾಯದ ಕೇವಲ 13% ಹೊಂದಿದ್ದಾರೆಂದು ಹೇಳಿರುವ ಮಾಹಿತಿಯನ್ನು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿರುತ್ತದೆ.

ರೈತರ ಆದಾಯ ದ್ವಿಗುಣವಾಗಿರುವುದಕ್ಕೆ ಕೇಂದ್ರ ಸರ್ಕಾರವು ನಿಖರವಾದ ವರದಿ ಹೊಂದಿಲ್ಲವೆನ್ನುವ ರಾಧೆಶ್ಯಾಂ ಜಾಧವ್ ಇವರು ಬೆಳೆಗಳಿಗೆ ಕನಿಷ್ಠ ಬೆಲೆ ನೀಡುವುದು ಈ ಯೋಜನೆಯ ಮುಖ್ಯ ಭಾಗವಾಗಿದ್ದು, ಅದು ಕೇವಲ 14% ರೈತರು (ಮುಖ್ಯವಾಗಿ ಗೋದಿ ಮತ್ತು ಭತ್ತ ಬೆಳೆಗಾರರು) ಇದರ ಉಪಯೋಗ ಪಡೆದುಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಇತರೆ ಅತಿ ಸಣ್ಣ ಹಾಗೂ ಸಣ್ಣ ರೈತರು ಇದರಿಂದ ವಂಚಿತರಾಗಿದ್ದಾರೆ ಎನ್ನುತ್ತಾರೆ ತಮ್ಮ ಲೇಖನದಲ್ಲಿ (ದಿ ಹಿಂದು ಬ್ಯುಸಿನೆಸ್ಸ್ ಪತ್ರಿಕೆ – 15, ಮೇ 2022). ಅದರಂತೆ, ಇದರ ಇನ್ನೊಂದು ಮುಖ್ಯ ಯೋಜನೆಯಾದ ಪ್ರಧಾನ ಮಂತ್ರಿ ಆಶಾ ಯೋಜನೆಯಡಿ ಒಟ್ಟು ಯೋಜಿತ 1500 ಕೋಟಿಗಳಲ್ಲಿ ಕೇವಲ 20.8% ನ್ನು ಮಾತ್ರ 2019 ಮತ್ತು 2024 ಚುನಾವಣಾ ಹತ್ತಿರದ ತಿಂಗಳುಗಳಲ್ಲಿ ಖರ್ಚು ಮಾಡಲಾಗಿದೆ ಎನ್ನುವ ಶ್ರೀಗಿರೀಶ್ ಜಾಲಿಹಾಳ್ ಮತ್ತು ನವ್ಯಾ ತಮ್ಮ ಲೇಖದಲ್ಲಿ (ದಿ ಕಲೆಕ್ಟಿವ್ ರಿಪೊಟರ್ಸ್, 7 ಮೇ 2024).

ಹೀಗೆ, ಆಕ್ಸ್‌ಫರ್ಡ್ ಯುನಿಯನ್ ಸಂವಾದದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರದ ಪ್ರಗತಿಯನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಪಾಲ್ಕಿ ಶರ್ಮಾರವರು ಮಾಡಿದ ವಾದವು ಹುರುಳಿಲ್ಲವಾಗಿದ್ದು, ಇವರಿಗೆ ನಿಜ ಭಾರತದ ಅರಿವೇ ಇಲ್ಲವೆಂಬುದನ್ನು ಸೂಚಿಸುತ್ತದೆ.

ಲತಾಮಾಲ
+ posts

ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮಿತ್ ಮಾಳವೀಯ ಎಂಬ ಸ್ತ್ರೀಪೀಡಕನೂ, ಬಿಜೆಪಿಯ ಬೇಟಿ ಬಚಾವೋ ಎಂಬ ಘೋಷಣೆಯೂ…

ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್‌ ಮಾಳವೀಯ ಪಶ್ಚಿಮ ಬಂಗಾಳದ...

ನೆನಪು | ರಾಜೀವ್ ತಾರಾನಾಥ್ ಮತ್ತು ಗೋಧ್ರಾ

ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಹಿಂದೊಮ್ಮೆ ಗೋಧ್ರಾ ಘಟನೆ...

ಜಿಜ್ಞಾಸೆ | ರಿಷಬ್ ಪಂತ್‌ಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ, ಸರ್ಕಾರಗಳ ಆದ್ಯತೆಗಳೇನು?

ಕ್ರಿಕೆಟಿಗ ರಿಷಬ್ ಪಂತ್ ಅಪಘಾತಕ್ಕೀಡಾಗಿ, ಅಷ್ಟೇ ವೇಗವಾಗಿ ಚೇತರಿಸಿಕೊಂಡು, ಮತ್ತೆ ಆಟವಾಡುತ್ತಿದ್ದಾರೆ....

ಜೀವನ ವಿಧಾನ | ಒನೈಡಾ ಆದಿವಾಸಿ ಸಮುದಾಯ ಮತ್ತು ಸದಾ ನಗುವ ಸ್ವಾಭಿಮಾನಿ ಮಹಿಳೆಯರು

ಒನೈಡಾ ಸಮುದಾಯದಲ್ಲಿ ಮಹಿಳೆಯರು ಆತ್ಮಗೌರವದಿಂದ ಬದುಕುತ್ತಿದ್ದಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ...