ಜಯನಗರ ನಾಲ್ಕನೇ ಬ್ಲಾಕ್ ಬೀದಿ ವ್ಯಾಪಾರಿಗಳಿಗೆ ಬಿಬಿಎಂಪಿ ಮಾರ್ಷಲ್‌ಗಳು ನೀಡುತ್ತಿರುವ ಕಿರುಕುಳ ತಡೆದು, ನಮ್ಮ ಜೀವನೋಪಾಯಕ್ಕೆ ರಕ್ಷಣೆ ನೀಡಬೇಕು ಎಂದು ಅಲ್ಲಿಯ ಬೀದಿ ವ್ಯಾಪಾರಿಗಳು ಬೆಂಗಳೂರು ದಕ್ಷಿಣ ವಲಯ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
“ನಮ್ಮ ಒಕ್ಕೂಟದ 27ನೇ ಕ್ರಾಸ್, 27ನೇ ಎ ಕ್ರಾಸ್, ಮುಖ್ಯರಸ್ತೆಯಲ್ಲಿ 65 ವ್ಯಾಪಾರಿಗಳು ಸುಮಾರು 30-40 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದಾರೆ. ಹಾಗೆಯೇ 9ನೇ ಮುಖ್ಯರಸ್ತೆಯಲ್ಲಿ 30 ಮಂದಿ ವ್ಯಾಪಾರಿಗಳು ಹಾಗೂ 10ನೇ ಮುಖ್ಯರಸ್ತೆಯಲ್ಲಿ 12 ಮಂದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. 2023ರ ನವೆಂಬರ್ 7ರಿಂದ ಬಿಬಿಎಂಪಿ ಮಾರ್ಷಲ್‌ಗಳೆಂದು ಹೇಳಿಕೊಂಡು ಕೆಲವರು ಬಂದು, ಅಲ್ಲಿನ ವ್ಯಾಪಾರಿಗಳ ಜೀವನೋಪಾಯದ ಹಕ್ಕಿಗೆ ಅಡ್ಡಿ ಮಾಡುತ್ತಿದ್ದಾರೆ. ಅವರು ಯಾರೆಂದು ನಮಗೆ ಗೊತ್ತಿಲ್ಲ. ಅವರ ಬಳಿ ಯಾವ ಆದೇಶವು ಇಲ್ಲ” ಎಂದು ಬೀದಿ ವ್ಯಾಪಾರಿಗಳು ಆರೋಪಿಸಿದ್ದಾರೆ.
“ನಮ್ಮಲ್ಲಿ ಎಲ್ಲರ ಬಳಿ ನಾವು ವ್ಯಾಪಾರ ಮಾಡುತ್ತಿರುವ ಬಗ್ಗೆ, ಸರ್ಕಾರ ಒಂದಲ್ಲ ಒಂದು ರೀತಿಯ ಗುರುತಿನ ಚೀಟಿ ಇದೆ. ಇನ್ನೂ ಕೆಲವರ ಬಳಿ ಬಿಬಿಎಂಪಿ 2000ನೇ ಇಸವಿಯಲ್ಲಿ ನೀಡಿದ ಪರವಾನಗಿ ಪ್ರತಿ ಇದೆ. ಇನ್ನು ಕೆಲವರ ಬಳಿ ಕೇಂದ್ರ ಸರ್ಕಾರ ಡಾ ಪಿಎಂ ಸ್ವಾನಿಧಿ ಯೋಜನೆಯಡಿ ಸಾಲ ಸಿಕ್ಕಿದೆ. ಕೆಲವರು 2017ರ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟಿತ್ತು. ಆದರೆ ಬಿಬಿಎಂಪಿ ಅವರ ಗುರುತಿನ ಚೀಟಿ ಕಲೆ ಹಾಕಿದೆ. ಅವರ ಅರ್ಜಿ ಸಂಖ್ಯೆ ಇದೆ. ಕೆಲವರಿಗೆ ಮಾತ್ರ 2017ರ ಸಮೀಕ್ಷೆಯಲ್ಲಿ ಕೈ ಬಿಡಲಾಯಿತು. ಆದರೆ ಅವರೂ ಕೂಡ ಗುರುತಿನ ಚೀಟಿಗಾಗಿ ಅರ್ಜಿ ಹಾಕಿದ್ದಾರೆ” ಎಂದರು.
“ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ಕಾಯ್ದೆ 2014ರ ಕಲಂ 3(3) ಪುಕಾರ ಕಾನೂನಿನಡಿಯಲ್ಲಿ ಸಮೀಕ್ಷೆ ಮುಗಿದು ವ್ಯಾಪಾರ ಮಾಡುತ್ತಿರುವ ಎಲ್ಲ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಡುವ ತನಕ ಯಾರನ್ನೂ ಎತ್ತಂಗಡಿ ಮಾಡುವಂತಿಲ್ಲ” ಎಂದು ತಿಳಿಸಿದ್ದಾರೆ.
“ಜಯನಗರ ನಾಲ್ಕನೇ ಕ್ರಾಸ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ಎಲ್ಲ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮುಂದುವರೆಸುವಂತೆ ರಕ್ಷಣೆ ನೀಡಬೇಕು. ಬೀದಿ ವ್ಯಾಪಾರಕ್ಕೆ ತೊಂದರೆಯಾಗದಂತೆ ಸೂಕ್ತ ಆದೇಶ ನೀಡಬೇಕು. ನಮಗೆ ಕಿರುಕುಳ ನೀಡುತ್ತಿರುವ ಮಾರ್ಷಲ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾಂಗ್ರೆಸ್‌ನವರು ಗೊಂದಲದಲ್ಲಿದ್ದು, ಹತಾಶರಾಗಿ ಮಾತನಾಡುತ್ತಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ
“ಬೀದಿ ವ್ಯಾಪಾರಿಗಳ(ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ )ಕಾಯ್ದೆ 2014ರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ತರಬೇತಿ (ಕಾರ್ಯಾಗಾರ ) ನೀಡಬೇಕು. ಬೀದಿ ವ್ಯಾಪಾರಿಗಳ ಕಾನೂನು ಕಲಂ 3ರ ಪ್ರಕಾರ ತಕ್ಷಣ ಪಟ್ಟಣ ವ್ಯಾಪಾರ ಸಮಿತಿಯಡಿ ಸಮೀಕ್ಷೆ ನಡೆಸಬೇಕು. ಜಯನಗರ 4ನೇ ಬಡಾವಣೆ ಬೀದಿ ವ್ಯಾಪಾರಿಗಳ ಸಮಸ್ಯೆ ಪರಿಹಾರ ಮಾಡುವುದಕ್ಕಾಗಿ ಕೂಡಲೇ ಪಟ್ಟಣ ವ್ಯಾಪಾರ ಸಮಿತಿ ಸಭೆ ಕರೆಯುವಂತೆ ಆದೇಶಿಸಿ ಕೂಡಲೇ ನಮ್ಮ ಹಕ್ಕಿನ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.