ದೆಹಲಿಯಿಂದ ಹಿಡಿದು ಬೆಂಗಳೂರುವರಗೆ ಕಾಂಗ್ರೆಸ್ ಗೊಂದಲದಲ್ಲಿದ್ದು, ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ರಾಯಚೂರಿನ ತಿಂತಣಿ ಬ್ರಿಜ್‌ನಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿದರು.
“ದೇಶ ಮತ್ತು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದ ಕಾಂಗ್ರೆಸ್ ಆತಂಕಗೊಂಡಿದೆ. ನುಡಿದಂತೆ ನಡೆದಿದ್ದೇವೆಂದು ಜಾಹೀರಾತು ನೀಡಿದರೆ ಫಲಾನುಭವಿಗಳಿಗೆ ತಲುಪಿದಂತಲ್ಲ. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಿಸಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಯಾವ ಪರಿಹಾರವನ್ನೂ ಬಿಡುಗಡೆಗೊಳಿಸುತ್ತಿಲ್ಲ” ಎಂದು ಹೇಳಿದರು.
“ಒಂದು ಕಡೆ ಮೂರು ಮಂದಿ ಡಿಸಿಎಂ ಮಾಡುತ್ತೇವೆಂದರೆ ಮತ್ತೊಬ್ಬರು ಮಾಡುವದಿಲ್ಲವೆಂದು ಹೇಳಿತ್ತಾರೆ. ಆಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಗೆ ಹೋಗುವದಿಲ್ಲ ಎನ್ನುತ್ತಾರೆ, ಮತ್ತೊಬ್ಬರು ಆಹ್ವಾನ ಬಂದಿಲ್ಲ ಅಂತಾರೆ. ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರೇ ಮತ ನೀಡಿದ್ದಾರೆನ್ನುವಂತೆ ಎಲ್ಲಿ ಅಲ್ಪಸಂಖ್ಯಾತರ ಓಟುಗಳು ಕೈತಪ್ಪುತ್ತವೊ ಎಂಬ ಆತಂಕದಿಂದ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭವನ್ನು ವಿರೋಧಿಸುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿದರೆ, ನಮಗೆ ಆಹ್ವಾನ ನೀಡಿಲ್ಲವೆಂದು ಹೇಳುವ ಮೂಲಕ ಕಾಂಗ್ರೆಸ್ ಗೊಂದಲಕ್ಕೆ ಸಿಲುಕಿದೆ” ಎಂದರು.
“ಗೊಂದಲದ ಗೂಡಾಗಿರುವ ಕಾಂಗ್ರೆಸ್ ಪಕ್ಷ ರೈತರು, ಕಾರ್ಮಿಕರು, ಮಹಿಳೆಯರ ಜನವಿರೋಧಿ ಸರ್ಕಾರವಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹ
“ರಾಜ್ಯದ ಕೇಂದ್ರ ಸಚಿವರನ್ನು ಬದಲಾವಣೆ ಮಾಡುವ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟಿದ್ದು, ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಬೇಕೆನ್ನುವ ಒತ್ತಾಯವನ್ನು ಕೇಂದ್ರದ ವರಿಷ್ಟರಿಗೆ ತಿಳಿಸಲಾಗಿದೆ. ಪಕ್ಷವನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರಲು ಬಿಜೆಪಿ ವರಿಷ್ಟರು ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಡಾ ಶಿವರಾಜ ಪಾಟೀಲ್, ಮಾನಪ್ಪ ವಜ್ಜಲ, ಮಾಜಿ ಶಾಸಕ ಕೆ ಶಿವನಗೌಡ ನಾಯಕ, ದೊಡ್ಡಬಸವರಾಜ ಸಿಂಧನೂರು ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ