ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳ ಮೇಲೆ ಜನರನ್ನು ವಿಭಜಿಸುವ ಬಿಜೆಪಿಯ ಹುನ್ನಾರವನ್ನು ತಿರಸ್ಕರಿಸುವ ಮೂಲಕ ಭಾರತೀಯ ಜನರು ಪ್ರಜಾಪ್ರಭುತ್ವವನ್ನು ಉಳಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಜೀವನ ಮತ್ತು ಜೀವನೋಪಾಯದ ಸಮಸ್ಯೆಗಳ ಮೇಲೆ ಮತ ಚಲಾಯಿಸಿ, ಜನರ ವಿಷಯಗಳು ಗೆಲ್ಲುವಂತೆ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಹೇಳಿದರು.
ಬೆಂಗಳೂರಿನಲ್ಲಿ ‘ಫೋರಂ ಫಾರ್ ಡೆಮಾಕ್ರಸಿ’ ಮತ್ತು ಸೌಹಾರ್ದ ವೇದಿಕೆ-ಕರ್ನಾಟಕ ಯೋಜಿಸಿದ್ದ ‘2024ರ ಸಂಸತ್ ಚುನಾವಣೆಯ ಜನಾದೇಶ – ಮುಂದಿನ ದಾರಿ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಜಾತ್ಯತೀತತೆಯತ್ತ ದಾಪುಗಾಲಿಟ್ಟಿರುವ ವಿರೋಧ ಪಕ್ಷಗಳು ಒಗ್ಗೂಡಿ ಸಾಮಾನ್ಯ ಜನರಿಗಾಗಿ ಕನಿಷ್ಠ ಕಾರ್ಯಕ್ರಮವನ್ನು ಜನರ ಮುಂದೆ ಇಡಬೇಕು. ರಾಜಕೀಯ ಪ್ರಜಾಪ್ರಭುತ್ವ ಮಾತ್ರವಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಮಹತ್ವವನ್ನು ಒತ್ತಿಹೇಳಬೇಕು” ಎಂದು ಅವರು ಹೇಳಿದರು.
“ಚುನಾವಣೆಗಳಲ್ಲಿ ಹಣ ಮತ್ತು ಬಲ, ಧರ್ಮ ಮತ್ತು ಜಾತಿ ಸಮಸ್ಯೆಗಳನ್ನು ಎದುರಿಸಲು ಸಂವಿಧಾನದ ಬಗ್ಗೆ ಸಾಮಾನ್ಯ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ರಾಜಕೀಯದಲ್ಲಿ ಲಿಂಗ ಪ್ರಾತಿನಿಧ್ಯ ಮತ್ತು ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅಗತ್ಯವಿದೆ. ಅದಕ್ಕಾಗಿ, ಮಹಿಳಾ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕಿದೆ” ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಹೋರಾಟಗಾರ ಪ್ರಶಾಂತ್ ಭೂಷಣ್, “2024ರ ಲೋಕಸಭಾ ಚುನಾವಣೆಯ ನಂತರ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಲು ದ್ವೇಷ, ಸುಳ್ಳು ಮತ್ತು ಕೋಮು ಧ್ರುವೀಕರಣವನ್ನು ಹರಡುವ ಬಿಜೆಪಿಯ ‘ಪೇಯ್ಡ್ ಟ್ರೋಲ್ ಆರ್ಮಿ’ಯನ್ನು ಎದುರಿಸಲು ನಾಗರಿಕ ಸಮಾಜವು ಕೆಲಸ ಮಾಡಿದೆ” ಎಂದು ಹೇಳಿದರು.

“ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪರ್ಯಾಯ ಮಾಧ್ಯಮಗಳನ್ನು ನಾಗರಿಕ ಸಮಾಜವು ಬೆಂಬಲಿಸಬೇಕು. ಬಿಜೆಪಿ ಪರವಾಗಿರುವ ‘ಟ್ರೋಲ್ ಆರ್ಮಿ’ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಕರಣಗಳನ್ನು ದಾಖಲಿಸಿ, ಕಾನೂನಾತ್ಮಕ ಹೋರಾಟ ಮುಂದುವರೆಸಬೇಕು. ದೀರ್ಘಾವಧಿಯಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಚುನಾವಣೆಗಳಿಗೆ ರಾಜ್ಯ ಧನಸಹಾಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರದ ಅಗತ್ಯವಿದೆ” ಎಂದು ಅವರು ಹೇಳಿದರು.
‘ಎದ್ದೇಳು ಕರ್ನಾಟಕ’ದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯೆ ತಾರಾ ರಾವ್ ಮಾತನಾಡಿ, “ಲೋಕಸಭಾ ಚುನಾವಣೆಯ ಸಂದರ್ಭವು ಕೇವಲ ಪ್ರೇಕ್ಷಕರಾಗಿದ್ದ ನಾಗರಿಕರನ್ನು ಸಕ್ರಿಯ ನಾಗರಿಕರನ್ನಾಗಿ ಪರಿವರ್ತಿಸಿತು. ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ನಿರ್ಧರಿಸಿತು. ಎದ್ದೇಳು ಕರ್ನಾಟಕ ಅಭಿಯಾನವು 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳನ್ನು ನಿರ್ಣಾಯಕವಾಗಿ ಪರಿವರ್ತಿಸುವಲ್ಲಿ ಯಶಸ್ತಿಯಾಗಿದೆ” ಎಂದು ವಿವರಿಸಿದರು.