ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಹತ್ಯೆಗೈದು, ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣದ ಆರೋಪಿಯ ಕುರಿತು ಮಾಹಿತಿ ಲಭ್ಯವಾಗಿದೆ. ಆತನ ಬಂಧನದ ಬಳಿಕ ಕೃತ್ಯಕ್ಕೆ ಕಾರಣ ತಿಳಿಯಬೇಕಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರಿನ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರೋಪಿ ಅನ್ಯ ರಾಜ್ಯದವನು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ನಾಪತ್ತೆಯಾಗಿರುವ ಆತನ ಪತ್ತೆ ಕಾರ್ಯ ಮುಂದುವರೆದಿದೆ. ಬಂಧನದ ಬಳಿಕ ಸ್ಪಷ್ಟವಾದ ಮತ್ತಷ್ಟು ಸತ್ಯಗಳು ಹೊರಬರಬರುತ್ತವೆ” ಎಂದು ಹೇಳಿದರು.
“ಯುವತಿಯನ್ನು ಕೊಂದ ಆರೋಪಿ, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಲು ಯತ್ನಿಸಿದ್ದಾನೆ. ಆದರೆ, ಸೂಟ್‌ಕೇಸ್‌ನಲ್ಲಿ ತುಂಬಲಾಗದೇ ಫ್ರಿಡ್ಜ್ನಲ್ಲಿಟ್ಟು ಎಸ್ಕೇಪ್ ಆಗಿದ್ದಾನೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಹಾಲಕ್ಷ್ಮಿ ಹತ್ಯೆ | ದೇಹ ಕತ್ತರಿಸಿದ ಸ್ಥಳದ ಗುರುತು ಪತ್ತೆಯಾಗದಂತೆ ಮನೆ ಸ್ವಚ್ಛ ಮಾಡಿರುವ ಕೊಲೆ ಆರೋಪಿ
ನೇಪಾಳದ 29 ವರ್ಷದ ಮಹಾಲಕ್ಷ್ಮೀಯನ್ನು ಹತ್ಯೆಗೈದು, ಮೃತದೇಹದ ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿ ಆರೋಪಿ ಪರಾರಿಯಾಗಿರುವುದು ತನಿಖೆಯಿಂದ ಬಯಲಾಗಿದೆ. ಈಗಾಗಲೇ ಆತನ ಪತ್ತೆಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ 6 ವಿಶೇಷ ತಂಡಗಳನ್ನು ರಚಿಸಲಾಗಿದೆ. ಘಟನೆ ನಡೆದ ಮನೆಯ ಸುತ್ತಮುತ್ತಲ ಪ್ರದೇಶಗಳ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.
