ಬೆಂಗಳೂರು-ಮೈಸೂರು ದಶಪಥ ಎಕ್ಸ್ಪ್ರೆಸ್ವೇನಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 117 ಕಿ.ಮೀ ಉದ್ದದ ಮಾರ್ಗದಲ್ಲಿ ಸ್ಪೀಡ್ ಲಿಮಿಟ್ಗಳನ್ನು ಜಾರಿ ಮಾಡಲಾಗಿದ್ದು, ಅತಿ ವೇಗದ ವಾಹನ ಸವಾರರಿಗೆ ದಂಡ ವಿಧಿಸುವುದು ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಅವರು ರಾಮನಗರ ಮತ್ತು ಮಂಡ್ಯದ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದು, ಎಕ್ಸ್ಪ್ರೆಸ್ವೇನಲ್ಲಿ ಇತ್ತೀಚೆಗೆ ಹೆಚ್ಚು ಮಾರಣಾಂತಿಕ ಅಪಘಾತಗಳು ವರದಿಯಾಗಿರುವ ಕುರಿತು ಚರ್ಚಿಸಿದರು.
ಅತಿಯಾದ ವೇಗ ಮತ್ತು ಅಜಾಗರೂಕ ಚಾಲನೆ ದುರಂತ ಸಾವಿಗೆ ಮುಖ್ಯ ಕಾರಣವಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದು, ಅತಿ ವೇಗವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ನಾವು ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇವೆ. ಮೊದಲನೆಯದಾಗಿ, ನಾವು ಎರಡೂ ದಿಕ್ಕುಗಳಲ್ಲಿ ಸ್ಪೀಡ್ ಲಿಮಿಟ್ ಸ್ಥಾಪಿಸುತ್ತೇವೆ. ರಾಡಾರ್ ಗನ್ಗಳು ಮುಖ್ಯವಾಗಿ ರಾಮನಗರ ಮತ್ತು ಮಂಡ್ಯ ಹೆದ್ದಾರಿಯಲ್ಲಿ ಸ್ಥಾಪಿಸಲಾಗುವುದು. ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ವಾಹನಗಳ ಚಿತ್ರಗಳನ್ನು ಅವರು ಸೆರೆಹಿಡಿಯುತ್ತಾರೆ. ಅಂತಹ ವಾಹನಗಳನ್ನು ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸಲಾಗುವುದು ಮತ್ತು ಚಾಲಕನಿಗೆ ದಂಡ ವಿಧಿಸಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ₹10 ಸಾವಿರ ಕೋಟಿ ಖರ್ಚು ಮಾಡಿ ಬೆಂಗಳೂರು-ಮೈಸೂರಿಗೆ ಅವೈಜ್ಞಾನಿಕ ಎಕ್ಸ್ಪ್ರೆಸ್ ವೇ ನಿರ್ಮಾಣ: ಮೋಹನ್ ದಾಸರಿ
“ಮುಂದಿನ ಹಂತಗಳಲ್ಲಿ, ʼಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾʼ(ಎಎನ್ಪಿಆರ್)ಗಳನ್ನು ಹಲವು ಸ್ಥಳಗಳಲ್ಲಿ ಸ್ಥಾಪಿಸಲಾಗುವುದು. ಇದರಿಂದ ಅತಿ ವೇಗದ ವಾಹನಗಳನ್ನು ಗುರುತಿಸಬಹುದು. ನಾವು ಈ ವಿಷಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಆದಷ್ಟು ಬೇಗ ಜಾರಿಗೆ ತರಲಾಗುವುದು” ಎಂದು ಹೇಳಿದ್ದಾರೆ.
ರಾಮನಗರ ಮತ್ತು ಮಂಡ್ಯ ನಡುವಿನ 18 ಸ್ಥಳಗಳಲ್ಲಿ ಮಾರಣಾಂತಿಕ ಅಪಘಾತಗಳು ಸಂಭವಿಸಿರುವ ಸ್ಥಳಗಳನ್ನು ಪರಿಶೀಲಿಸಿದ್ದು, “ವೇಗದ ಮಿತಿಯನ್ನು ಉಲ್ಲಂಘಿಸಿ 100 ಕಿಮೀಗಿಂತ ಅಧಿಕ ವೇಗದಲ್ಲಿ ವಾಹನ ಚಲಾಯಿಸುವ ಜನರ ಪರವಾನಗಿಗಳನ್ನು ಅಮಾನತುಗೊಳಿಸಲಾಗುವುದು” ಎಂದು ಕುಮಾರ್ ಸುಳಿವು ನೀಡಿದ್ದಾರೆ.